ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದಿದ್ದ ಅಧಿಕಾರಿಗಳ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ
ಪಾಟ್ನಾ: ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು (Illegal Sand Mining) ತಡೆಯಲು ಬಂದಿದ್ದ ಮಹಿಳಾ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಗಣಿಗಾರಿಕೆ ಅಧಿಕಾರಿಗಳ (Officials) ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಬಿಹಾರದ ಬಿಹ್ತಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಅಕ್ರಮ ಗಣಿಗಾರಿಕೆಯ ಕಡಿವಾಣ ಹಾಕಲು ಮೂವರು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗುಂಪೊಂದು ಅಧಿಕಾರಿಗಳ ಮೇಲೆ ಕಲ್ಲು ಎಸೆದು ದೊಣ್ಣೆಗಳಿಂದ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೀಡಿಯೋದಲ್ಲಿ ಏನಿದೆ?: ಗುಂಪೊಂದು ಮರಳು ತುಂಬಿದ ಟ್ರಕ್ಗಳು ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಅಲ್ಲಿದ್ದ ಅಧಿಕಾರಿಗಳು ತಡೆದಿದ್ದಾರೆ. ಈ ವೇಳೆ ಆ ಗುಂಪು, ಜಿಲ್ಲಾ ಗಣಿ ಅಧಿಕಾರಿ ಹಾಗೂ ಇಬ್ಬರು ಇನ್ಸ್ಪೆಕ್ಟರ್ಗಳ ಮೇಲೆ ಕಲ್ಲು ತೂರಾಟ ನಡೆಸಿದರು.
ಆ ಗುಂಪಿನಲ್ಲಿದ್ದ ಕಿಡಿಗೇಡಿಗಳು ಅಧಿಕಾರಿಗಳನ್ನು ಹೊಡೆಯಿರಿ ಎನ್ನುತ್ತಿರುವುದನ್ನು ಕೇಳಬಹುದಾಗಿದೆ. ಅಷ್ಟೇ ಅಲ್ಲದೇ ಆ ಅಧಿಕಾರಿಗಳನ್ನು ಕಿಡಿಗೇಡಿಗೇಡಿಗಳು ಸುತ್ತುವರೆದು ಕೋಲು ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿ 44 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 50 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.