ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ: 13 ವರ್ಷದ ಬಾಲಕ ದುರ್ಮರಣ
ಬೆಂಗಳೂರು: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬಾಲಕ ದುರ್ಮರಣ ಹೊಂದಿರುವಂತಹ ದಾರಣ ಘಟನೆ ನಗರದ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಮಹೇಶ್(13) ಮೃತ ಬಾಲಕ. ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಬಳಿ ನಿಂತುಕೊಂಡಿದ್ದಾಗ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಬಾಲಕ ಗಂಭೀರ ಗಾಯಗೊಂಡಿದ್ದ. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಾಲಕ ಮಹೇಶ್ ಮೂಲತಃ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದವನು. ಕೂಲಿ ಕಾರ್ಮಿಕ ದಂಪತಿ ಮಲ್ಲಪ್ಪ, ಸರಸ್ವತಿಯವರ 2ನೇ ಪುತ್ರ. ಸದ್ಯಬ್ಯಾಪ್ಟಿಸ್ಟ್ ಆಸ್ಪತ್ರೆ ಎದುರು ಮಹೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕ ಮಹೇಶ್ ಚೋಳನಾಯಕನಹಳ್ಳ ಅಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ. ಕಳೆದ ಎಂಟು ವರ್ಷಗಳಿಂದ ಮೃತರ ಪೊಷಕರು ಕೂಲಿ ಕೆಲಸ ಮಾಡುತ್ತಿದ್ದರು.
ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಗೋಡೌನ್ನಲ್ಲಿ ಲಿಯಾಕತ್ ಎಂಬುವನು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ. ಈ ವೇಳೆ ಬಾಲಕ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ. ಸಿಲಿಂಡರ್ ಬ್ಲಾಸ್ಟ್ ರಭಸಕ್ಕೆ ಬಾಲಕನ ದೇಹ ಛಿದ್ರವಾಗಿ ಎನ್ನಲಾಗುತ್ತಿದೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸದ್ಯ ಘಟನೆಯ ಬೆನ್ನೆಲೆ ಲಿಯಾಕತ್ ಎಸ್ಕೇಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.