ಹೈದರಾಬಾದನ್ನು 8 ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ಶಿಪ್ ಪಟ್ಟಕ್ಕೆ ಮುತ್ತಿಕ್ಕಿದ ಕೆಕೆಆರ್..!

ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 17ನೇ ಸೀಸನ್ನ ಅಂತಿಮ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಮೂರನೇ ಬಾರಿಗೆ ಈ ಟ್ರೋಫಿಯನ್ನು ಗೆದ್ದಿದೆ, ಈ ಮೊದಲು ತಂಡ 2012 ಮತ್ತು 2014 ವರ್ಷಗಳಲ್ಲಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಂತಿಮ ಪಂದ್ಯದಲ್ಲಿ ಕೆಕೆಆರ್ ತಂಡದಿಂದ ಅದ್ಭುತ ಬೌಲಿಂಗ್ ಪ್ರದರ್ಶನ ಕಂಡು ಬಂತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 10.3 ಓವರ್‌ಗಳಲ್ಲಿ ಗುರಿ ಮುಟ್ಟಿತು.
ಕೋಲ್ಕತ್ತಾ 10 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ ಆಗಿದೆ. ವೆಂಕಟೇಶ್ ಅಯ್ಯರ್ ಅವರ ಅಮೋಘ ಅರ್ಧಶತಕದ ಆಧಾರದ ಮೇಲೆ ಕೋಲ್ಕತ್ತಾ ಕೇವಲ 10.3 ಓವರ್‌ಗಳಲ್ಲಿ 114 ರನ್‌ಗಳ ಸಾಧಾರಣ ಗುರಿಯನ್ನು ಸಾಧಿಸಿ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.