ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ 20ರ ಯುವತಿ ಮರುದಿನ ಬೆಡ್ ರೂಮ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ
ಹೈದರಾಬಾದ್: 20 ವರ್ಷದ ಯುವತಿಯೊಬ್ಬಳು ತನ್ನ ಹುಟ್ಟುಹಬ್ಬದ ದಿನವೇ ಸಾವಿನ ಹಾದಿ ಹಿಡಿದಿದ್ದಾಳೆ. ಸ್ನೇಹಿತರೊಂದಿಗೆ ಸೇರಿ ಜನ್ಮದಿನ ಆಚರಿಸಿಕೊಂಡಿದ್ದ ಯುವತಿ ಅದೇ ದಿನ ಮಧ್ಯರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ. ಈ ಘಟನೆ ಹೈದರಾಬಾದ್ನ ಕುಕ್ಕಟಪಲ್ಲಿಯ ಬಾಲಾಜಿ ನಗರದಲ್ಲಿ ನಡೆದಿದ್ದು, ಮೃತಳನ್ನು ಹರ್ಷಿತಾ (20) ಎಂದು ಗುರುತಿಸಲಾಗಿದೆ.
ಆಂಧ್ರ ಪ್ರದೇಶದ ಗುಂಟೂರು ಮೂಲದ ಸಾಯಿಕಿರಣ್ ಮತ್ತು ನರ್ಮದಾ ದಂಪತಿಯ ಏಕೈಕ ಪುತ್ರಿಯಾಗಿದ್ದ ಹರ್ಷಿತಾ, ಸಿಎ ಅಧ್ಯಯನ ಮಾಡುತ್ತಿದ್ದಳು. ಹರ್ಷಿತಾ ಗುರುವಾರ ತನ್ನ ಜನ್ಮದಿನವನ್ನು ಫ್ರೆಂಡ್ಸ್ ಜೊತೆ ಆಚರಿಸಿಕೊಂಡಿದ್ದಾಳೆ. ಅಲ್ಲದೇ ಸಿನಿಮಾಗೆ ಹೋಗಿದ್ದಳು. ಬಳಿಕ ಅಂದು ಮಧ್ಯರಾತ್ರಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ತನ್ನ ಬೆಡ್ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.
ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ತಂದೆ ಸಾಯಿಕಿರಣ್ ಮತ್ತು ತಾಯಿ ನರ್ಮದಾ ನೆಲ್ಲೂರಿಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ವಾಪಸ್ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಎಷ್ಟೇ ಬಡಿದರು ಮಗಳು ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಾಯಿಕುಮಾರ್ ಮನೆಯ ಮಾಲೀಕನ ಸಹಾಯದಿಂದ ಬಾಗಿಲು ಮುರಿದು ಬೆಡ್ರೂಮ್ಗೆ ಹೋಗಿ ನೋಡಿದಾಗ ಮಗಳು ಹರ್ಷಿತಾ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದನ್ನು ಪೋಷಕರು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಕುಕ್ಕಟಪಲ್ಲಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿನ ಒತ್ತಡದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ತನಿಖೆ ಕೈಗೊಂಡಿದ್ದಾರೆ.