ಸಿದ್ದರಾಮಯ್ಯರ ಕೊಂಡಾಡಿದ ಲಕ್ಷ್ಮಣ್ ಸವದಿ!
ಬೆಳಗಾವಿ: ವಿಧಾನಪರಿಷತ್ ಸದಸ್ಯತ್ವ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಿಜೆಪಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ.
ಗುರುವಾರ ಅಥಣಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ನಡೆದ ಸಭೆಯಲ್ಲಿ ಅವರು ಈ ವಿಚಾರವನ್ನು ಸವದಿಯವರು ತಿಳಿಸಿದರು.
ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅವರ ಬೆಂಬಲಿಗರು ಕಾಂಗ್ರೆಸ್ ಸೇರಿ ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದರು. ಬಿಜೆಪಿ ಅಥಣಿಯಿಂದ ಮಹೇಶ ಕುಮಠಳ್ಳಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಬೆಂಬಲಿಗರ ಸಲಹೆಯಂತೆ ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ಸದಸ್ಯ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಆದರೆ, ಸವದಿಯವರು ಕಾಂಗ್ರೆಸ್ ಸೇರುವ ಬಗ್ಗೆ ಖಚಿತಪಡಿಸಿಲ್ಲ. ಆದರೆ, ಬಿಜೆಪಿ ನಾಯಕರ ಷಡ್ಯಂತ್ರಗಳ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂಎಲ್‌ಸಿ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ್ದರು ಎಂದು ಸ್ಮರಿಸಿದ್ದು, ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಊಹಾಪೋಹಗಳು ಶುರುವಾಗುವಂತೆ ಮಾಡಿದೆ.
ವಿರೋಧ ಪಕ್ಷದ ನಾಯಕನಾಗಿದ್ದರೂ, ನನ್ನನ್ನು ಸೋಲಿಸಲು ಬಿಜೆಪಿ ನಾಯಕರು ನಡೆಸುತ್ತಿರುವ ಷಡ್ಯಂತ್ರಗಳ ಬಗ್ಗೆ ಸಿದ್ದರಾಮಯ್ಯ ಎಚ್ಚರಿಸಿದ್ದರು. ನನ್ನ ಗೆಲುವಿಗೆ ಯಾವುದೇ ಅಡೆತಡೆ ಉಂಟಾಗದಂತೆ ಸಿದ್ದರಾಮಯ್ಯ ನೋಡಿಕೊಂಡರು ಎಂದು ಸ್ಮರಿಸಿದರು. ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ, ನಂತರ ಮುಂದಿನ ನಡೆ ಕುರಿತು ಮಾಹಿತಿ ನೀಡುವುದಾಗಿ ಸವದಿ ತಿಳಿಸಿದರು.
ಬಳಿಕ ಪಕ್ಷದಲ್ಲಿದ್ದಾಗ ಬಿಜೆಪಿ ತಮ್ಮನ್ನು ನಡೆಸಿಕೊಂಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕುಮಟಳ್ಳಿ ಅವರನ್ನು ಗೆಲ್ಲಿಸುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡುವಾಗ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ನಾನು ಪಕ್ಷದಲ್ಲಿದ್ದ ಅವಧಿಯಲ್ಲಿ ಬಿಜೆಪಿ ನಾಯಕತ್ವದಿಂದ ತೀವ್ರ ಚಿತ್ರಹಿಂಸೆ ಅನುಭವಿಸಿದೆ. ಇತ್ತೀಚಿನ ದಿನಗಳಲ್ಲಿ ಬಸವಕಲ್ಯಾಣ ಮತ್ತು ದಾವಣಗೆರೆಯಲ್ಲಿ ನಡೆದ ಬೃಹತ್ ಸಮಾವೇಶಗಳಲ್ಲಿ ಬಿಜೆಪಿ ನಾಯಕತ್ವ ನನ್ನನ್ನು ಅವಮಾನಿಸಿತ್ತು ಎಂದು ಹೇಳಿದರು.
ಇದಕ್ಕೂ ಮುನ್ನ ಬಿಜೆಪಿಯ ಹಲವು ಮುಖಂಡರು ಅಥಣಿಯಲ್ಲಿ ಸವದಿ ಅವರನ್ನು ಭೇಟಿ ಮಾಡಿ ಪಕ್ಷ ತೊರೆಯದಂತೆ ತಡೆಯುವ ಪ್ರಯತ್ನ ನಡೆಸಿದರು. ಆದರೆ ಸವದಿ ಬೆಂಬಲಿಗರು ಅವರನ್ನು ಅಲ್ಲಿಂದ ಕಳುಹಿಸಿದರು. ಬಿಜೆಪಿ ಮುಖಂಡ ರಾಜೇಶ್ ನೇರ್ಲಿ ಅವರು ಸವದಿಯವರನ್ನು ಭೇಟಿ ಮಾಡಿ ಮನವೊಲಿಸಲು ಮುಂದಾಗಿದ್ದರು. ಆದರೆ, ಸವದಿ ಅವರ ಬೆಂಬಲಿಗರ ಗುಂಪೊಂದು ಅಥಣಿಯ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ಸವದಿ ಅವರು ಬಿಜೆಪಿ ತೊರೆದ ನಂತರ ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ನ ಇತರ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಸವದಿಯವರಿಗೆ ಅಥಣಿಯಿಂದ ಪಕ್ಷದ ಟಿಕೆಟ್ ನೀಡುವುದರ ಜೊತೆಗೆ, ಪಕ್ಷದಲ್ಲಿ ಅವರಿಗೆ ಪ್ರಮುಖ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.