- ರಾಜ್ಯ
- 2:34 ಅಪರಾಹ್ನ
- ಫೆಬ್ರವರಿ 4, 2023
ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕ- ಶಿಕ್ಷಕಿಯ ಮೇಲೆ ಪೋಕ್ಸೋ ಕೇಸ್

ಶಿವಮೊಗ್ಗ (ಫೆ.04): ಕಳೆದ ತಿಂಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ತನ್ನದೇ ಶಾಲೆಯ ೫ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದಾದ ಬಳಿಕ ಈ ಬಗ್ಗೆ ಪ್ರಶ್ನೆ ಮಾಡಲು ಪೋಷಕರು ಬಂದಾಗ ಶಿಕ್ಷಕನ ಪರವಹಿಸಿ ಮಾತನಾಡಿದ ಶಾಲೆಯ ಶಿಕ್ಷಕಿಗೂ ಈ ಕಾರ್ಯಕ್ಕೆ ಸಹಕಾರ ನೀಡಿದ್ದಾಳೆ ಎಂದು ಇಬ್ಬರ ಮೇಲೂ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹುಂಚ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಕಳೆದೊಂದು ತಿಂಗಳ ಹಿಂದೆ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಅಸಭ್ಯವರ್ತನೆ ತೋರಿದ್ದನು. ನೊಂದ ಬಾಲಕಿ ತಾಯಿಯ ಬಳಿ ಘಟನೆಯ ವಿವರಿಸಿದ್ದಾಳೆ.
ಬುದ್ಧಿ ಹೇಳುವ ಬದಲು ಶಿಕ್ಷನಿಗೆ ಸಹಕಾರ: ಇನ್ನು ಮಗಳಿಗೆ ಶಿಕ್ಷನ ಅಸಭ್ಯ ವರ್ತನೆ ತೋರಿರುವುದು ಸೂಕ್ಷ್ಮ ವಿಚಾರವೆಂದು ತಿಳಿದ ತಾಯಿ ಶಾಲೆಗೆ ಹೋಗಿ ಶಿಕ್ಷಕನಿಗೆ ನೇರವಾಗಿ ಬುದ್ಧಿ ಹೇಳದೇ ಅದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯ ಬಳಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ನಂತರ, ಬಾಲಕಿಯ ತಾಯಿ ಶಾಲೆಯ ಶಿಕ್ಷಕನಿಗೆ ನೀವೇ ಬುದ್ಧಿ ಹೇಳುವಂತೆಯೂ ಸೂಚಿಸಿದ್ದಾರೆ. ಆದರೆ, ಶಿಕ್ಷಕಿ ಯಾವುದೇ ಶಿಕ್ಷಕನ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡದೆ, ಕಾಮುಕ ಶಿಕ್ಷಕ ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ಶಿಕ್ಷಕನಿಗೆ ಸಹಕಾರ ನೀಡಿದ್ದಾರೆ. ಇದರಿಂದ ಮಹಿಳೆ ಮನನೊಂದು ಮಗಳನ್ನು ಶಾಲೆಗೆ ಕಳುಹಿಸದೇ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮಕ್ಕಳ ರಕ್ಷಣಾ ಘಟಕದ ನೆರವು: ಈ ಘಟನೆಯ ಬಗ್ಗೆ ತಿಳಿದ ಪಿಎಸ್‌ಐ ಸುಷ್ಮಾ ನೇತೃತ್ವದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿಯವರು ಬಾಲಕಿಯ ಮನೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿನಿಗೆ ಅದೇ ಶಾಲೆಯ ಶಿಕ್ಷಕ ತರಗತಿ ಕೋಣೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದಾಳೆ. ಈ ಹೇಳಿಕೆಯನ್ನು ಪರಿಗಣಿಸಿ ಶಿಕ್ಷಕನ ವಿರುದ್ಧ ಸ್ಥಳೀಯ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಂತರ, ನ್ಯಾಯ ಕೇಳಲು ಹೋದ ತಾಯಿ ಹಾಗೂ ಸಂತ್ರಸ್ತ ಬಾಲಕಿಗೆ ಸಹಕರಿಸದೇ ಆರೋಪಿ ಶಿಕ್ಷಕನಿಗೆ ಸಹಕಾರ ನೀಡಿದ ಶಿಕ್ಷಕಿಯ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.