- ರಾಷ್ಟ್ರೀಯ
- 5:36 ಅಪರಾಹ್ನ
- ಮೇ 26, 2023
ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು

ಪಾಟ್ನಾ: ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿ (Teacher Fight) ಶಾಲೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಬಿಹಾರದ ಪಾಟ್ನಾ (Patna) ಜಿಲ್ಲೆಯಲ್ಲಿ ನಡೆದಿದೆ.
ಕೌರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಶಾಲಾ ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಮತ್ತು ಶಿಕ್ಷಕಿ ಅನಿತಾ ಕುಮಾರಿ ನಡುವೆ ಈ ಗಲಾಟೆ ನಡೆದಿದೆ. ಸದ್ಯ ಜಗಳದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲೆಯ ಇಬ್ಬರು ಶಿಕ್ಷಕಿಯರು ಪರಸ್ಪರ ಜಗಳವಾಡುತ್ತಿದ್ದರೆ, ಶಾಲಾ ಮಕ್ಕಳು ಮೂಕಪ್ರೇಕ್ಷಕರಂತೆ ಜಗಳ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಶಾಲೆಯ ಒಳಗೆ ಆರಂಭವಾದ ಗಲಾಟೆ ಹೊರಗಿನ ಮೈದಾನದವರೆಗೂ ತಲುಪಿದೆ. ಕೆಳಗೆ ಬಿದ್ದುಕೊಂಡು ಮಣ್ಣಿನಲ್ಲೇ ಇಬ್ಬರು ಒದ್ದಾಡುತ್ತಾ ಗುದ್ದಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.
ತರಗತಿಯಿಂದ ಒಬ್ಬರು ಹೊರಗೆ ಹೋಗುತ್ತಿರುವಾಗ ಮತ್ತೊಬ್ಬರು ಚಪ್ಪಲಿ ಹಿಡಿದುಕೊಂಡು ಓಡಿ ಬಂದು ಹೊಡೆದಾಗ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಮತ್ತೊಬ್ಬ ಮಹಿಳೆಯು ಕೂಡ ಹೊಡೆದಿದ್ದಾರೆ.
ಈ ಘಟನೆಯ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನು ಕೇಳಿದಾಗ, ಇದು ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಂಗಾಮಿ ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯ ನಡುವಿನ ವೈಯಕ್ತಿಕ ವಿವಾದದಿಂದ ಈ ವಾಗ್ವಾದ ಉಂಟಾಗಿದ್ದು, ಇದು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರೂ ಶಿಕ್ಷಕರಿಗೆ ವಿವರಣೆ ನೀಡಲು ಸಮನ್ಸ್ ನೀಡಲಾಗಿದೆ. ಅಧಿಕೃತ ಸೂಚನೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.