- ಕ್ರೀಡೆ
- 7:49 ಫೂರ್ವಾಹ್ನ
- ಜನವರಿ 19, 2023
Shubman Gill: ಸ್ಪೋಟಕ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಶುಭ್ಮನ್ ಗಿಲ್

ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸಿ ಇದೀಗ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ಆಟಗಾರನ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದೇ ಇಲ್ಲಿ ವಿಶೇಷ.
ಹೌದು, ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ಇಶಾನ್ ಕಿಶನ್ ಹೆಸರಿನಲ್ಲಿತ್ತು. ಕಿಶನ್ ಬಾಂಗ್ಲಾದೇಶ್ ವಿರುದ್ಧ ಸಿಡಿಲಬ್ಬರದ ಡಬಲ್ ಸೆಂಚುರಿ ಸಿಡಿಸಿದಾಗ ಅವರ ವಯಸ್ಸು 24 ವರ್ಷ 145 ದಿನಗಳು. ಇದೀಗ ಈ ದಾಖಲೆಯನ್ನು ಶುಭ್ಮನ್ ಗಿಲ್ ಮುರಿದಿದ್ದಾರೆ.

ಹೈದರಾಬಾದ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ 145 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ಗಿಲ್ ಪಾಲಾಗಿದೆ.

ಶುಭ್ಮನ್ ಗಿಲ್ ತಮ್ಮ 23ನೇ ವಯಸ್ಸಿನಲ್ಲಿ (23 ವರ್ಷ/132 ದಿನಗಳು) ಈ ಸಾಧನೆ ಮಾಡಿದ್ದು, ಈ ಮೂಲಕ ಇಶಾನ್ ಕಿಶನ್ ಕೆಲ ತಿಂಗಳ ಹಿಂದೆ ಬರೆದಿದ್ದ ವಿಶ್ವ ದಾಖಲೆಯನ್ನು ಶುಭ್ಮನ್ ಗಿಲ್ ಮುರಿದರು.

ಇನ್ನು ಈ ಪಂದ್ಯದಲ್ಲಿ 149 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್ನೊಂದಿಗೆ 208 ರನ್ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ 10ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಭಾರತದ 5ನೇ ಬ್ಯಾಟ್ಸ್ಮನ್ ಎಂಬ ಹಿರಿಮೆಗೂ ಶುಭ್ಮನ್ ಗಿಲ್ ಪಾತ್ರರಾದರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಈ ಸಾಧನೆ ಮಾಡಿದ್ದರು.