ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ವೆಚ್ಚ 20 ಲಕ್ಷ ರೂ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ ಎಂವಿ ಗಂಗಾ ವಿಲಾಸ್‌ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
32 ಸ್ವಿಸ್ ಪ್ರವಾಸಿಗರು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪಲು ಮೊದಲ ಪ್ರಯಾಣವನ್ನು ಇದರ ಮೂಲಕ ಕೈಗೊಂಡಿದ್ದಾರೆ. ಇದರೊಂದಿಗೆ ಮೋದಿ ಅವರು 1,000 ಕೋಟಿ ರೂಗೂ ಹೆಚ್ಚು ಮೌಲ್ಯದ ಹಲವಾರು ಒಳನಾಡು ಜಲಮಾರ್ಗ ಯೋಜನೆಗಳಿಗೆ ಮೋದಿ ಅವರು ಅಡಿಪಾಯ ಹಾಕಿದರು.
ಎಂವಿ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದ್ದು, ಇದು 51 ದಿನಗಳಲ್ಲಿ 3,200 ಕಿ.ಮೀ ಕ್ರಮಿಸಲಿದೆ. ಮೊದಲ ಪ್ರಯಾಣವನ್ನು ಕೈಗೊಳ್ಳಲಿರುವ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರನ್ನು ವಾರಣಾಸಿ ಬಂದರಿನಲ್ಲಿ ಹೂಮಾಲೆ ಮತ್ತು ಶೆಹನಾಯಿ ನಾದದೊಂದಿಗೆ ಸ್ವಾಗತಿಸಲಾಯಿತು. ಅವರು ವಿಹಾರಕ್ಕೆ ತೆರಳುವ ಮೊದಲು ವಾರಣಾಸಿಯ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಈ ಪಂಚತಾರಾ ಚಲಿಸುವ ಹೋಟೆಲ್ 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನು ಹೊಂದಿದೆ ಎಂದು ಕ್ರೂಸ್‌ನ ನಿರ್ದೇಶಕ ರಾಜ್ ಸಿಂಗ್ ತಿಳಿಸಿದರು. ಇದಲ್ಲದೆ, ಇದು 40 ಸಿಬ್ಬಂದಿಗೆ ವಸತಿ ಹೊಂದಿದೆ. ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಇದು 27 ನದಿ ವ್ಯವಸ್ಥೆಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುತ್ತದೆ ಮತ್ತು ವಿವಿಧ ಪ್ರಮುಖ ಸ್ಥಳಗಳ ಮೂಲಕ ಪ್ರಯಾಣಿಸುತ್ತದೆ.
ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು ಲಕ್ನೋದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಾಟ್‌ಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್‌ನ ಶಾಹಿಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳನ್ನು ಕ್ರೂಸ್ ತನ್ನ ಮಾರ್ಗದಲ್ಲಿ ಒಳಗೊಂಡಿದೆ.