ಲೂಧಿಯಾನ: ಅನಿಲ ಸೋರಿಕೆಯಾಗಿ 9 ಮಂದಿ ಸಾವು, 11 ಮಂದಿ ಗಂಭೀರ!
ನವದೆಹಲಿ (ಏ.30): ಪಂಜಾಬ್ನ ಲೂಧಿಯಾನಾದ ಫ್ಯಾಕ್ಟರಿಯಲ್ಲಿ ಭಾನುವಾರ ಸಂಭವಿಸಿದ ಅನಿಲ ಸೋರಿಕೆ ಘಟನೆಯಲ್ಲಿ ಈವರೆಗೂ ಚಿಕ್ಕಮಕ್ಕಳೂ ಸೇರಿದಂತೆ 9 ಮಂದಿ ಸಾವು ಕಂಡಿದ್ದು, 11 ಮಂದಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಲೂಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅನಿಲ ಸೋರಿಕೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, 1 ಕಿಲೋಮೀಟರ್ ವ್ಯಾಪ್ತಿ ಪ್ರದೇಶವನ್ನು ಸೀಲ್ಡೌನ್ ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ರಕ್ಷಣಾ ಕಾರ್ಯಾಚರಣೆಗೆ ಇಳಿಸಿದ್ದಾರೆ. ಗಂಭೀರವಾಗಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಿಯಾಸ್ಪುರದಲ್ಲಿರುವ ಕಟ್ಟಡವೊಂದರಲ್ಲಿ ಬೆಳಗ್ಗೆ 7:15ಕ್ಕೆ ಅಪಘಾತ ಸಂಭವಿಸಿದೆ. ಅನಿಲ ಸೋರಿಕೆಯಾದ ನಂತರ 11 ಮಂದಿ ಮೂರ್ಛೆ ಹೋಗಿದ್ದರು ಎಂದು ಲುಧಿಯಾನದ ಎಸ್ಡಿಎಂ ಸ್ವಾತಿ ಹೇಳಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡ ಸ್ಥಳದಲ್ಲಿದ್ದಾರೆ. ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಅನಿಲ ಸೋರಿಕೆಗೆ ಕಾರಣದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಂಭೀರವಾಗಿರುವ ಜನರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಗರದ ಗಯಾಸ್ಪುರ ಪ್ರದೇಶದ ಸಿತಾರಾ ಚಿತ್ರಮಂದಿರದ ಬಳಿಯಿರುವ ಹಾಲಿನ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಹತ್ತಕ್ಕೂ ಹೆಚ್ಚು ಜನರು ಮೂರ್ಛೆ ಹೋಗಿದ್ದರು. ಇದರಿಂದಾಗಿ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಜನರ ಓಡಾಟಕ್ಕೂ ನಿರ್ಬಂಧ ಹೇರಲಾಗಿದೆ. ಗೋಯಲ್ ಮಿಲ್ಕ್ ಪ್ಲಾಂಟ್ ಎಂಬ ಹೆಸರಿನ ಈ ಕಾರ್ಖಾನೆಯಲ್ಲಿ ದೊಡ್ಡ ಕಂಪನಿಗಳ ಡೈರಿ ಉತ್ಪನ್ನಗಳು ಆಗಮಿಸುತ್ತವೆ. ಇಲ್ಲಿಂದ ಅವು ಆಯಾ ಮನೆಗೆ ರವಾನೆಯಾಗುತ್ತದೆ. ಡೈರಿ ಉತ್ಪನ್ನಗಳನ್ನು ತಂಪಾಗಿ ಇರಿಸಲು ಬಳಸುವ ಅನಿಲ ಸೋರಿಕೆಯಾಗಿದೆ. ಈ ಪ್ಲ್ಯಾಂಟ್ನ ಅಕ್ಕಪಕ್ಕದಲ್ಲಿದ್ದ ಮನೆಯ ವ್ಯಕ್ತಿಗಳು ಮೂರ್ಛೆ ಹೋಗಿರುವ ಕಾರಣ ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ. 9 ಮಂದಿ ಸಾವು ಕಂಡಿದ್ದನ್ನು ಸ್ಥಳೀಯ ಆರೋಗ್ಯ ಇಲಾಖೆ ಕೂಡ ಖಚಿತಪಡಿಸಿದೆ.
ಲೂಧಿಯಾನ ಪಶ್ಚಿಮದ ಎಸ್ಡಿಎಂ ಸ್ವಾತಿ ಅವರು ಲೂಧಿಯಾನ ಅನಿಲ ಸೋರಿಕೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಖಚಿತವಾಗಿ ಅನಿಲ ಸೋರಿಕೆ ಪ್ರಕರಣವಾಗಿದೆ ಎನ್ನುವುದನ್ನೂ ಅವರು ಖಚಿತ ಮಾಡಿದ್ದು, ಜನರನ್ನು ಸ್ಥಳಾಂತರಿಸಲು ಎನ್ಡಿಆರ್ಎಫ್ ತಂಡಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, 11 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.
ಜನರಲ್ಲಿ ಉಸಿರಾಟದ ಸಮಸ್ಯೆ: ಮೂಲಗಳ ಪ್ರಕಾರ, ಅನಿಲ ಸೋರಿಕೆಯಾದ 300 ಮೀಟರ್ ಪ್ರದೇಶದಲ್ಲಿ ಹೋದ ಎಲ್ಲರಲ್ಲೂ ಉಸಿರಾಟದ ತೊಂದರೆ ಎದುರಾಗಿದೆ. ಅನಿಲ ಸೋರಿಕೆಯಾದ ಪ್ರದೇಶದಲ್ಲಿ ಜನ ಓಡಾಟ ಕೂಡ ಸಾಧ್ಯವಾಗುತ್ತಿಲ್ಲ. ಪೊಲೀಸರು ಮತ್ತು ಸಿವಿಲ್ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಸಾಮಾಜಿಕ ಸಂಘಟನೆಗಳ ಆಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ಆಗಮಿಸಿದ್ದು, ಪ್ರಜ್ಞಾಹೀನ ಜನರನ್ನು ಪ್ರದೇಶದಿಂದ ಹೊರ ತೆಗೆಯುವ ಪ್ರಯತ್ನ ನಡೆಸಲಾಗುತ್ತಿದೆ. ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.