ಅಪಘಾತದ ಬಳಿಕ ಮೊದಲ ಸಂದೇಶ: 'ಚೇತರಿಸುತ್ತಿದ್ದೇನೆ, ಎಲ್ಲಾ ಸವಾಲುಗಳಿಗೆ ಸಿದ್ಧ', ರಿಷಬ್ ಪಂತ್ ಟ್ವೀಟ್
ಮುಂಬೈ(ಜ.17): ಕಳೆದ ತಿಂಗಳು ರಸ್ತೆ ಅಪಘಾತಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕ್ರಿಕೆಟಿಗ ರಿಷಭ್ ಪಂತ್ ಅಪಘಾತದ ಬಳಿಕ ಮೊದಲ ಬಾರಿ ಟ್ವೀಟ್ ಮಾಡಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಹಾಗೂ ಮುಂದಿನ ಸವಾಲುಗಳಿಗೆ ಸಿದ್ಧನಾಗಿದ್ದೇನೆ ಎಂದಿದ್ದಾರೆ.
‘ಎಲ್ಲರ ಬೆಂಬಲ, ಶುಭ ಹಾರೈಕೆಗಳಿಂದ ಸಂತುಷ್ಟಗೊಂಡಿದ್ದೇನೆ. ಅಪಘಾತದ ಕ್ಷಣದಿಂದಲೂ ಅಧ್ಬುತ ರೀತಿಯಲ್ಲಿ ಬೆಂಬಲಿಸುತ್ತಿರುವ ಬಿಸಿಸಿಐ, ಸರ್ಕಾರಕ್ಕೆ ವಂದನೆಗಳು. ವೈದ್ಯರು, ಸಹ ಆಟಗಾರರು, ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಲು ನನ್ನಲ್ಲಿ ಪದಗಳಿಲ್ಲ. ಶೀಘ್ರವೇ ಮೈದಾನದಲ್ಲಿ ನಿಮ್ಮನ್ನು ಭೇಟಿಯಾಗಲು ಹಾತೊರೆಯುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ, ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಿಸಲು ತಮಗೆ ನೆರವಾದ ರಜತ್ ಕುಮಾರ್, ನಿಶು ಕುಮಾರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದು, ಅವರ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 6 ವಾರಗಳ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಮಾಧ್ಯಮವೊಂದರ ವರದಿ ಪ್ರಕಾರ ಪಂತ್ ಕ್ರಿಕೆಟ್‌ಗೆ ಮರಳಲು ಕನಿಷ್ಠ 18 ತಿಂಗಳು ಅಂದರೆ ಒಂದೂವರೆ ವರ್ಷವಾಗಲಿದೆ ಎನ್ನಲಾಗಿದೆ. ಪಂತ್ ಈ ವರ್ಷದ ಐಪಿಎಲ್, ಏಕದಿನ ವಿಶ್ವಕಪ್ ಮಾತ್ರವಲ್ಲ 2024ರ ಐಪಿಎಲ್ ಹಾಗೂ ಟಿ20 ವಿಶ್ವಕಪ್‌ಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
I am humbled and grateful for all the support and good wishes. I am glad to let you know that my surgery was a success. The road to recovery has begun and I am ready for the challenges ahead.
— Rishabh Pant (@RishabhPant17) January 16, 2023
Thank you to the @BCCI , @JayShah & government authorities for their incredible support.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಡಿಸೆಂಬರ್ 29ರ ರಾತ್ರಿ ಗುರುವಾರ ತಮ್ಮ ಮರ್ಸಿಡೀಸ್ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು.
ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ ಯಾವುದೇ ಮೂಳೆ ಮುರಿದಿಲ್ಲ. ಬೆಂಕಿಯಿಂದ ಸುಟ್ಟಗಾಯಗಳೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದರು.
ನೆರವಿಗೆ ಧಾವಿಸಿದ್ದ ಬಸ್ ಚಾಲಕ
ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬಿದ್ದಿದ್ದ ರಿಷಭ್‌ರ ಸಹಾಯಕ್ಕೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಚಾಲಕ ಧಾವಿಸಿದ್ದಾರೆ. ರಸ್ತೆಯ ಪಕ್ಕದಲ್ಲೇ ರಿಷಭ್‌ರನ್ನು ಮಲಗಿಸಿ ತಮ್ಮ ಹೊದಿಕೆಯನ್ನು ಅವರ ಮೈ ಮೇಲೆ ಹಾಕಿ, ಬಳಿಕ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಮೊದಲು ರೂರ್ಕೀಯ ಸಕ್ಷಮ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಡೆಹರಾಡೂನ್ ಬಳಿಕ ಇದೀಗ ರಿಷಭ್ ಪಂತ್ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಪಂತ್‌ಗೆ ಅಸ್ತಿಬಂಧಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ.