ರಾಜ್ಯದ ಸಿರಿಧಾನ್ಯ ಯೋಜನೆಗೆ ಕೇಂದ್ರದ ಶಹಬ್ಬಾಸ್: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮೆಚ್ಚುಗೆ
ಬೆಂಗಳೂರು (ಜ.23): ಸಿರಿಧಾನ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ಸಿರಿ ಯೋಜನೆಯ ಬಗ್ಗೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ‘ಸಿರಿಧಾನ್ಯ ಹಾಗೂ ಸಾವಯವ; ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2023’ರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ರೈತ ಸಿರಿ ಯೋಜನೆ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದೆ. ಸ್ವಾಸ್ಥ್ಯ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ ಆಗಲಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಭಾಗವಾಗಿ ಕರ್ನಾಟಕ ಸರ್ಕಾರ ಆಯೋಜಿಸಿದ ಸಿರಿಧಾನ್ಯ ಮೇಳದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ ಕರ್ನಾಟಕ ಕೃಷಿ ಇಲಾಖೆ ಸಿರಿಧಾನ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದಕ್ಕೆ ಅಭಿನಂದಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರೈತ ಶಕ್ತಿ ಯೋಜನೆ ಮೂಲಕ ಪ್ರತಿ ಒಂದು ಎಕರೆಗೆ 250 ರು. ಡೀಸೆಲ್‌ಗೆ ಸಹಾಯಧನ ನೀಡಲಾಗುತ್ತಿದೆ. ಇದು ದೇಶದಲ್ಲಿಯೇ ಮೊದಲು ಎಂದರು.
ಸಿರಿಧಾನ್ಯಗಳ ಉದ್ಯಮಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ಯುವ ಪೀಳಿಗೆಯನ್ನು ಸಿರಿಧಾನ್ಯಗಳತ್ತ ಆಕರ್ಷಿಸಲು ಬೆಂಗಳೂರು ಮತ್ತು ರಾಯಚೂರು ಕೃಷಿ ವಿಶ್ವ ವಿದ್ಯಾಲಯಗಳ ಮಿಲೆಟ್ ಸೆಂಟರ್ ಆಫ್ ಎಕ್ಸ್ಲೆನ್ಸ್ನಿಂದ ಸಿರಿಧಾನ್ಯಗಳ ನವೀನ ಪಾಕ ವಿಧಾನ ಪುಸಕ್ತವನ್ನು ಹೊರತರಲಾಗಿದೆ ಎಂದು ಹೇಳಿದರು.
ಸಿರಿಧಾನ್ಯ ಪ್ರಶಸ್ತಿ ಪ್ರದಾನ: ಸಿರಿಧಾನ್ಯ ಕೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಸಂಸ್ಥೆ, ವಿಜ್ಞಾನಿ ಹಾಗೂ ನವೋದ್ಯಮಿಗಳಿಗೆ ಈ ವೇಳೆ ಸಿರಿಧಾನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತರಾವ್ ಖೂಬಾ, ಉತ್ತರ ಪ್ರದೇಶ ಸರ್ಕಾರದ ಕೃಷಿ ರಫ್ತು ಮತ್ತು ತೋಟಗಾರಿಕೆ ಸಚಿವ ದಿನೇಶ್ ಪ್ರತಾಪ್ ಸಿಂಗ್, ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಎಫ್ಐಸಿಸಿಐ ಮುಖ್ಯಸ್ಥ ಶಾಜು ಮಂಗಳಂ ಸೇರಿದಂತೆ ಮೊದಲಾದವರಿದ್ದರು.
202 ಕೋಟಿ ರು. ಒಡಂಬಡಿಕೆ: ಸಿರಿಧಾನ್ಯ ಮೇಳದಲ್ಲಿ ಒಟ್ಟು 139 ವ್ಯಾಪಾರ ವಹಿವಾಟು ಸಭೆ ನಡೆದಿದ್ದು, ಪರಸ್ಪರ 201.91 ಕೋಟಿ ರು. ಮೊತ್ತ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸಭೆಯಲ್ಲಿ 68 ಮಾರುಕಟ್ಟೆದಾರರು, 59 ಉತ್ಪಾದಕರು ಭಾಗವಹಿಸಿದ್ದರು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2 ಲಕ್ಷ ಮಂದಿ ಭೇಟಿ: ಮೂರು ದಿನಗಳ ಕಾಲ ನಡೆದ ಸಿರಿಧಾನ್ಯ ಮೇಳದಲ್ಲಿ 250ಕ್ಕೂ ಅಧಿಕ ರೈತರು, ಸಂಘ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಿದ್ದಾರೆ. 2 ಲಕ್ಷಕ್ಕೂ ಅಧಿಕ ಮಂದಿ ಸಿರಿಧಾನ್ಯ ಮೇಳಕ್ಕೆ ಭೇಟಿ ನೀಡಿದ್ದಾರೆ.