ಬಂಟ್ವಾಳ: ಬಿಪಿಎಲ್ ಕಾರ್ಡ್ ರದ್ದುಮಾಡುವುದು, ಅದನ್ನು ಪುನರ್ ವಿಮರ್ಶೆ ಮಾಡಿ ಕೊಡಿಸುತ್ತೇವೆ ಎನ್ನುವುದು ಆಡಳಿತ ಪಕ್ಷದ ಪ್ರಚಾರದ ತಂತ್ರ ಎಂದು ಬಂಟ್ಚಾಳದಲ್ಲಿ ಆರೋಪಿಸಿರುವ ಮಾಜಿ ಸಚಿವ ಬಿ.ರಮಾನಾಥ ರೈ, ರಾಜಧರ್ಮದ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು ಅನುಷ್ಟಾನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ.
ಆಡಳಿತ ಪಕ್ಷಕ್ಕೆ ಸಂಬಂಧಪಟ್ಟವರೇ ಬಿಪಿಎಲ್ ಕಾರ್ಡ್ ರದ್ದು ವಿಚಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ, ರದ್ದು ಮಾಡಿದ್ದು ಯಾರು, ಮತ್ತೆ ಕೊಡಿಸುವುದಾಗಿ ಹೇಳುವುದು ಪ್ರಚಾರ ಗಿಟ್ಟಿಸಿಕೊಳ್ಳಲೋ ಎಂದವರು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರಿಗೆ ಪರಿಹಾರ ನೀಡುವುದು ಸಜೀವ ಸರ್ಕಾರದ ಜವಾಬ್ದಾರಿ. ಅದನ್ನು ಕಾರ್ಯರೂಪಕ್ಕಿಳಿಸಬೇಕು ಎಂದ ಅವರು, ತುಂಬೆ ವೆಂಟೆಡ್ ಡ್ಯಾಂನ ವಿಚಾರದಲ್ಲಿ 17 ಕೋಟಿ ರೂಗಳನ್ನು ಪರಿಹಾರಕ್ಕಾಗಿ ಮಂಜೂರು ಮಾಡಿಸಿದ್ದೇನೆ ಎಂದರು.
ತಾನು ಮಣ್ಣಿನ, ಕಲ್ಲಿನ ವ್ಯಾಪಾರ ಮಾಡುತ್ತಿಲ್ಲ, ಕೇವಲ ಕೃಷಿ ಮಾಡುತ್ತಿದ್ದೇನೆ. ಕೆಲವರು ಭರವಸೆ ಕೊಟ್ಟದ್ದನ್ನು ಪತ್ರಿಕಾಗೋಷ್ಟಿ ಮಾಡ್ತಾರೆ, ನಾನು ಆದೇಶ ಪತ್ರ ತೋರಿಸಿ ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ ಎಂದರು.
ರಾಜಾರೋಷವಾಗಿ ಈಗ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆಪಾದಿಸಿದ ರೈ, ಈಗಿನ ಶಾಸಕರ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ನನ್ನ ಹತ್ತು ವರ್ಷಗಳ ಅವಧಿಯಲ್ಲಾದ ವರ್ಗಾವಣೆಯನ್ನು ಹೋಲಿಸಿ ಯಾವುದು ಜಾಸ್ತಿ ಎಂದು ಸವಾಲೆಸೆದರು.
ಕೋಟಿ ರೂಗಳ ಕಾಮಗಾರಿಯನ್ನು ಬಿಜೆಪಿಯ ಕಾರ್ಯಕರ್ತರು ಮಾಡುತ್ತಿದ್ದಾರೆ, ಯಾರೋ ಗುತ್ತಿಗೆ, ಕೆಲಸ ಯಾರದ್ದೋ ಎಂಬಂತಾಗಿದೆ.ಯಾರದ್ದೋ ಮನೆಯಲ್ಲಿ ಕಾರ್ಮಿಕರ ಕಿಟ್ ಕೊಡಲಾಗುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾಗ ಇದ್ದರೂ ಪಂಚಾಯತಿಯಲ್ಲಿ ಲಸಿಕೆ ನೀಡುವ ಕೆಲಸಗಳು ನಡೆದಿವೆ. ಕೆ.ಎಸ್.ಆರ್.ಟಿ.ಸಿ.ಯ ಐಸಿಯು ಬಸ್ ಗ್ರಾಮಗಳಿಗೆ ಬರುವಾಗ ಕಾಂಗ್ರೆಸ್ ಆಡಳಿತ ಇರುವ ಗ್ರಾಪಂಗಳಲ್ಲಿ ಆ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಅದರ ನಿರ್ವಹಣೆ ಮಾಡಿದರೆ, ಬಿಜೆಪಿ ಬೆಂಬಲಿತರ ಆಡಳಿತ ಇರುವಲ್ಲಿ ಪಂಚಾಯತಿ ನಿರ್ವಹಿಸುತ್ತದೆ. ಇವರಿಗೆ ಆಡಳಿತದ ಅನುಭವದ ಕೊರತೆ ಇದೆ.ನಾವು ಬಾಯಲ್ಲಿ ಹೇಳುದು ಒಂದು ಮಾಡುವುದು ಇನ್ನೊಂದು ಮಾಡಿಲ್ಲ ಎಂದರು.
ರಾಜಧರ್ಮ ಕುರಿತು ಭಾಷಣ ಮಾಡಿದರೆ ಸಾಲದು, ನಡವಳಿಕೆಯಲ್ಲಿ ಮಾಡಬೇಕು.ನಾವು ಈ ಕ್ಷೇತ್ರದಲ್ಲಿ ಜಾತಿ, ಧರ್ಮ, ಭಾಷೆ ನೋಡದೆ ಮಾಡಿದ್ದೇವೆ. ಅದು ರಾಜಧರ್ಮ. ಯಾರೂ ನನ್ನನ್ನು ಮತೀಯವಾದಿ ಎನ್ನುವುದಿಲ್ಲ. ನಾನು ಯಾವ ಮಣ್ಣಿನ ವ್ಯಾಪಾರವೂ ಮಾಡಿಲ್ಲ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮಾ ಮೋರಾಸ್, ತಾಪಂ ಮಾಜಿ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಧನಲಕ್ಷ್ಮೀ ಸಿ ಬಂಗೇರ,ಪುರಸಭಾ ಸದಸ್ಯರಾದ ಜನಾರ್ಧನ್ ಚಂಡ್ತಿಮಾರ್ ಮೊದಲಾದವರು
ಉಪಸ್ಥಿತರಿದ್ದರು.