ಯುವ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ರಾಜೀನಾಮೆ; ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ!
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Election) ರಾಮನಗರದಿಂದ (Ramanagara) ಸ್ಪರ್ಧಿಸಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿಯವರು (Nikhil Kumaraswamy) ಪಕ್ಷದ ಯುವ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕು. ಪಕ್ಷವನ್ನು ಕಟ್ಟುವ ಕಾರ್ಯ ಆಗಬೇಕು. ಸೋಲಿನಿಂದ ನಾನು ಕಂಗೆಟ್ಟಿಲ್ಲ. ಇನ್ನೂ ಮುಂದೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬೆಳೆಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚುನಾವಣೆಯಲ್ಲಿ ಸೋಲೇ ಅಂತಿಮವಲ್ಲ. ಸೋತಿದ್ದರೂ ಸಹ ಪಕ್ಷದಿಂದ ದೂರ ಉಳಿಯದೇ ಪಕ್ಷವನ್ನು ಬೆಳೆಸಲು ದುಡಿಯುತ್ತೇನೆ. ಪಕ್ಷ ಮರು ನಿರ್ಮಾಣ ಆಗಬೇಕು. ಅದಕ್ಕಾಗಿಯೇ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಇಕ್ಬಾಲ್ ಹುಸೇನ್ 87,690 ಮತ ಪಡೆದಿದ್ದರೆ, ಜೆಡಿಎಸ್ (JDS) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 76,975 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಿಜೆಪಿ (BJP) ಅಭ್ಯರ್ಥಿ ಗೌತಮ್ ಗೌಡ 12,912 ಮತ ಪಡೆದಿದ್ದರು.