ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್
ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಸ್ಟೇಟಸ್ ಇಟ್ಟು, ಫೇಸ್‌ಬುಕ್‌ನಲ್ಲಿ ಲೈಕ್, ಕಾಮೆಂಟ್ ಮಾಡಿದ್ದಕ್ಕೆ ಆತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬಿಂಕದಕಟ್ಟಿ ಗ್ರಾಮದ ರಾಘವೇಂದ್ರ ಪೂಜಾರ ಎಂಬಾತನ ಮೇಲೆ 8 ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ರಾಮದ ಮುಖ್ಯ ಬಜಾರ್ ರಸ್ತೆ ರಾಘವೇಂದ್ರನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾರೆ. ನಾನು ಸ್ಟೇಟಸ್ ಹಾಕಿಲ್ಲ ಎಂದು ಹೇಳಿದರೂ, ಕೇಳದೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೂ ಮನೆಗೆ ನುಗ್ಗಿ ಚಾಕು, ಕಲ್ಲುಗಳ ಮೂಲಕ ಹಲ್ಲೆಗೆ ಯತ್ನಿಸಿದರು. ಅಲ್ಲದೇ ಹೀಗೆ ಮುಂದುವರಿದರೇ ಬೇರೆ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಬೆದರಿಕೆ ಹಾಕಿದ್ದಾರೆ ಎಂದು ರಾಘವೇಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ರಾಘವೇಂದ್ರನ ಜೊತೆಗೆ ಬಿಜೆಪಿ ಮುಖಂಡ ರಾಜು ಕುರುಡಗಿ ಸೇರಿದಂತೆ ಅನೇಕರು ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡರು. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರಾದ ಮಲ್ಲರಡ್ಡಿ ಅಗಸಿನಕೊಪ್ಪ, ಶ್ರೀನಿವಾಸ ಅಗಸಿನಕೊಪ್ಪ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.