ಮಂಗಳೂರು : ಹಂಪನ್ ಕಟ್ಟೆ ಸಿಗ್ನಲ್ ಬಳಿ ಮೂರು ಬಸ್ ಗಳ ನಡುವೆ ಸರಣಿ ಅಪಘಾತ!
ಮಂಗಳೂರು: ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ಮೂರು ಸಿಟಿ ಬಸ್ ಗಳ ನಡುವೆ ಸೋಮವಾರ ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ನಿಂದ ಕುಂಜತ್ತಬೈಲ್ ಕಡೆಗೆ ಹೋಗುತ್ತಿದ್ದ ಬಸ್, ತಲಪಾಡಿ ಕಡೆಗೆ ಹೋಗುತ್ತಿದ್ದ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ತಲಪಾಡಿಗೆ ಹೋಗುತ್ತಿದ್ದ ಬಸ್, ಅದರ ಮುಂಭಾಗದಲ್ಲಿದ್ದ ನೀರುಮಾರ್ಗದ ಬಸ್ಸಿನ ಹಿಂಭಾಗಕ್ಕೆ ಬಡಿದಿದೆ.
ಘಟನೆಯಲ್ಲಿ ಮೂರು ಬಸ್ ಗಳು ಜಖಂಗೊಂಡಿವೆ. ಕುಂಜತ್ತಬೈಲ್‌ನ ಬಸ್ ನ ಮುಂಭಾಗ ಮತ್ತು ತಲಪಾಡಿ ಬಸ್ ನ ಹಿಂಭಾಗ ಮತ್ತು ಮುಂಭಾಗದ ಗಾಜುಗಳು ಪುಡಿಯಾಗಿದ್ದು, ಹಾನಿ ಸಂಭವಿಸಿದೆ. ನೀರುಮಾರ್ಗ ಬಸ್ ನ ಹಿಂಭಾಗಕ್ಕೂ ಹಾನಿಯಾಗಿದೆ.ಕುಂಜತ್ತಬೈಲ್ ಬಸ್ ನ ಡ್ರೈವರ್ ಮತ್ತು ಡ್ರೈವರ್ ಪಕ್ಕದ ಅಡ್ಡ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮಧ್ಯಾಹ್ನ ವಾದ್ದರಿಂದ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ ಗಳನ್ನು ತೆರವುಗೊಳಿಸಿ, ವಾಹನ ಸಂಚಾರ ಸುಗಮಗೊಳಿಸಿದರು.