ಮಂಗಳೂರು: ವೀರ ಯೋಧ ಮುರಳೀಧರ ರೈ ಪಾರ್ಥಿವ ಶರೀರ ಕುಟುಂಬಿಕರಿಗೆ ಹಸ್ತಾಂತರ
ಮಂಗಳೂರು, ಜ 25: ಭಾರತೀಯ ಸೇನೆಯಲ್ಲಿ ಶಸಸ್ತ್ರ ಸೀಮಾ ಬಲ್ ಯೋಧರಾಗಿ ಮಧ್ಯಪ್ರದೇಶದ ಭೋಪಾಲದಲ್ಲಿ ಸೇವಾ ನಿರತರಾಗಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಶಕ್ತಿನಗರದ ವೀರ ಯೋಧ ಹವಲ್ದಾರ್ ಮುರಳೀಧರ ರೈ ಅವರ ಪಾರ್ಥಿವ ಶರೀರವನ್ನು ಸಕಲ ಸರಕಾರಿ ಗೌರವ ಸಲ್ಲಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್ ಅವರು ವೀರ ಯೋಧ ಮುರಳೀಧರ ರೈ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.
ಮುರಳೀಧರ ರೈ ಅವರು ಫೆಬ್ರವರಿ 5ರಂದು ನಡೆಯಲಿದ್ದ ತಮ್ಮ ತಾಯಿಯ ಒಂದು ವರ್ಷದ ಪುಣ್ಯತಿಥಿ ಪ್ರಯುಕ್ತ ಮಂಗಳವಾರ ಮಂಗಳೂರಿಗೆ ಆಗಮಿಸುವುದಲ್ಲಿದ್ದರು. ಅಲ್ಲದೆ ತಮ್ಮ ಏಳು ತಿಂಗಳ ಮಗುವನ್ನು ಮೊದಲ ಬಾರಿಗೆ ನೋಡಲೆಂದು ಊರಿನತ್ತ ಹೊರಡುವವರಿದ್ದರು. ರವಿವಾರ ತಮ್ಮ ಪತ್ನಿಯೊಂದಿಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು.
ಆದರೆ ವಿಧಿ ಅವರ ಈ ಖುಷಿಯನ್ನು ಕಸಿದುಕೊಂಡಿತ್ತು. ಮಧ್ಯಪ್ರದೇಶದ ಭೋಪಾಲದಲ್ಲಿ ಕರ್ತವ್ಯದಲ್ಲಿದ್ದ ಮುರಲೀಧರ ರೈ (37) ಅವರು ರವಿವಾರ ಮಲಗಿದ್ದಲ್ಲೇ ಹೃದಯಾಘಾತಕ್ಕೊಳಗಾಗಿದ್ದು, ಸೋಮವಾರ ಬೆಳಗ್ಗೆ ಜೊತೆಗಿದ್ದವರಿಗೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಹೃದಯಾಘಾತದಿಂದ ಅವರು ಮೃತಪಟ್ಟಿರುವುದು ಗೊತ್ತಾಗಿತ್ತು.