ಮಂಗಳೂರು ವಿಮಾನ ನಿಲ್ದಾಣ : ಅಂತಾರಾಷ್ಟ್ರೀಯ ಕಾರ್ಗೋ ಸೇವೆ ಪ್ರಾರಂಭ
ಮಂಗಳೂರು (ಮಂಗಳೂರು ವಿಮಾನ ನಿಲ್ದಾಣ): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ನಿಂದ ಐಎಕ್ಸ್ 815 ವಿಮಾನ 2522 ಕೆಜಿಗಳಷ್ಟು ಹಣ್ಣು ಹಾಗೂ ತರಕಾರಿಗಳನ್ನು ದುಬೈ ಗೆ ಕೊಂಡೊಯ್ಯುವ ಮೂಲಕ ಕಾರ್ಗೋ ಕಾರ್ಯಾಚರಣೆಗಳು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜು.05 ರಂದು ಈ ಕಾರ್ಯಾಚರಣೆಗಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿದ್ದು, ಎಎಎಚ್ಎಲ್ ಕಾರ್ಗೋ ತಂಡ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಾಯಕತ್ವ ತಂಡ ಹಾಗೂ ಕಸ್ಟಮ್ಸ್, ಏರ್ಲೈನ್-ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್- ಮತ್ತು ಸಿಐಎಸ್ಎಫ್ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೇ 1, 2023 ರಂದು ವಿಮಾನ ನಿಲ್ದಾಣವು ದೇಶೀಯ ಸರಕು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಒಂದು ವರ್ಷದ ನಂತರ ಈ ನಿರೀಕ್ಷಿತ ಬೆಳವಣಿಗೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ.10 ರಂದು ಕಸ್ಟಮ್ಸ್ ಕಮಿಷನರ್ ಈ ವಿಮಾನ ನಿಲ್ದಾಣದಲ್ಲಿ ಕಸ್ಟೋಡಿಯನ್ ಹಾಗೂ ಕಸ್ಟಮ್ಸ್ ಕಾರ್ಗೋ ಸೇವೆ ಒದಗಿಸುವವರನ್ನು ನೇಮಕ ಮಾಡಿದ್ದರು.
ದೇಶೀಯ ಕಾರ್ಗೋ ವಿಭಾಗದಲ್ಲಿ, ಮೇ 1, 2023 ರಿಂದ ತನ್ನ ಕಾರ್ಯಾಚರಣೆಯ ಮೊದಲ 11-ತಿಂಗಳಲ್ಲಿ 3706.02 ಟನ್ ಸರಕುಗಳನ್ನು ನಿರ್ವಹಿಸುವಲ್ಲಿ ವಿಮಾನ ನಿಲ್ದಾಣ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
ಅಂತರರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳ ಪ್ರಾರಂಭ ಕರಾವಳಿ ಕರ್ನಾಟಕ ಮತ್ತು ಕೇರಳ ಮತ್ತು ಒಳನಾಡಿನ ರಫ್ತುದಾರರಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಆಹಾರ, ಯಂತ್ರದ ಭಾಗಗಳು, ಜವಳಿ, ಶೂಗಳು, ಉಷ್ಣವಲಯದ ಮೀನು, ಘನೀಕೃತ ಮತ್ತು ಒಣ ಮೀನು, ಪ್ಲಾಸ್ಟಿಕ್ ಬಣ್ಣ ಸಾಮಗ್ರಿಗಳು ಮತ್ತು ಹಡಗಿನ ಭಾಗಗಳನ್ನು (ಪ್ರೊಪೆಲ್ಲರ್) ರಫ್ತು ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ಗಳು ತಮ್ಮ ಸಂಪರ್ಕದೊಂದಿಗೆ ದುಬೈ, ದೋಹಾ, ದಮ್ಮಾಮ್, ಕುವೈತ್, ಮಸ್ಕತ್, ಅಬುಧಾಬಿ ಮತ್ತು ಬಹ್ರೇನ್ಗಳಿಗೆ ಸರಕುಗಳನ್ನು ಕಳುಹಿಸಲು ರಫ್ತುದಾರರಿಗೆ ಅನುವು ಮಾಡಿಕೊಡುತ್ತದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳೂರು ನಗರದಿಂದ 16 ಕಿಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ನಗರದ ರೈಲು ನಿಲ್ದಾಣದಿಂದ ಕೇವಲ 22 ಕಿಮೀ ದೂರದಲ್ಲಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕ ರಾಜ್ಯದ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಇದು ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಕರ್ನಾಟಕದ ದಕ್ಷಿಣ ಕರಾವಳಿಯ ತುದಿಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿ ಕರ್ನಾಟಕ, ಉತ್ತರ ಕೇರಳ ಮತ್ತು ಕೂರ್ಗ್ನ ಸುಂದರ ಗುಡ್ಡಗಾಡು ಪ್ರದೇಶಕ್ಕೆ ಹೆಬ್ಬಾಗಿಲು. ವಿಮಾನ ನಿಲ್ದಾಣವು ಉಡುಪಿ ಮತ್ತು ಮಣಿಪಾಲ ಮತ್ತು ಹತ್ತಿರದ ನಗರಗಳಿಗೆ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.