ಭೀಕರ ಅಪಘಾತ : ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು, ಮಗು ಸೇರಿ ಐವರು ಜಲಸಮಾಧಿ

ಮಂಡ್ಯ ಭೀಕರ ಅಪಘಾತ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ಮಂಗಳವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದಿದ್ದು, ಭೀಕರ ಅಪಘಾತ ದಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ.
ಮೈಸೂರು ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ವಿಸಿ ನಾಲೆಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರನ್ನು ಹೊರ ತೆಗೆದಿದ್ದು, ಕಾರಿನಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಮೃತರನ್ನು ತುಮಕೂರು ನಿವಾಸಿ ಕೆ.ಟಿ.ಕೃಷ್ಣಪ್ಪ(64), ಚಂದ್ರಪ್ಪ(61), ಧನಂಜಯ್ಯ (55), ಬಾಬು, ಜಯಣ್ಣ ಎಂದು ಗುರುತಿಸಲಾಗಿದ್ದು, ಅವರ ಮೃತದೇಹವನ್ನು ಪಾಂಡವಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮವಾರವಷ್ಟೇ ಕೆಆರ್ ಎಸ್ ಡ್ಯಾಂನಿಂದ ವಿಸಿ ನಾಲೆಗೆ ನೀರು ಬಿಡಲಾಗಿತ್ತು ಎಂದು ತಿಳಿದು ಬಂದಿದೆ.
ಡೆತ್ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ:
ಕೊಡಗು: ಡೆತ್ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ ಆಗಿದ್ದು, ಜೊತೆಗೆ ತನ್ನನ್ನು ಮಹಿಳೆಯೊಬ್ಬಳು ಹನಿಟ್ರ್ಯಾಪ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಜಿಲ್ಲೆಯ ಮಡಿಕೇರಿ ನಗರದ ಉಕ್ಕುಡ ನಿವಾಸಿ ಸಂದೇಶ್ (38) ನಾಪತ್ತೆಯಾದ ನಿವೃತ್ತ ಯೋಧ. ಜೀವಿತಾ ಎಂಬ ಮಹಿಳೆ ವಿರುದ್ಧ ಸಂದೇಶ್ ಆರೋಪ ಮಾಡಿದ್ದಾರೆ. ಸತೀಶ್ ಎಂಬ ಪೊಲೀಸ್ ಹೆಸರನ್ನೂ ಯೋಧ ಸಂದೇಶ್ ಬರೆದಿದ್ದಾರೆ. ಪೊಲೀಸ್ ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ.
ಮಡಿಕೇರಿ ನಗರದ ಪಂಪಿನ ಕೆರೆ ಬಳಿ ಸಂದೇಶ್ಗೆ ಸೇರಿದ ವಸ್ತು ಪತ್ತೆಯಾಗಿವೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಂದ ಶೋಧ ಕಾರ್ಯ ಆರಂಭಿಸಲಾಗಿದೆ.
ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆ ಶವ ಪತ್ತೆ
ದಾವಣಗೆರೆ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆ ಶವ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದಿದೆ. ಪತ್ನಿ ತೇಜಸ್ವಿನಿ(30)ಯನ್ನು ಪತಿಯೇ ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಪತಿ ಗುಡದಯ್ಯ, ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿತ್ತು, 2 ಹೆಣ್ಣು ಮಕ್ಕಳಿದ್ದವು. ಪತಿ ಹಾಗೂ ಕುಟುಂಬಸ್ಥರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.