ಭಾರತ ತಂಡವನ್ನು ತೆಗೆದು ಹಾಕಲು ಐಸಿಸಿಗೆ ಪಾಕ್ ಮಾಜಿ ಕ್ರಿಕೆಟ್ ಆಟಗಾರನ ಮನವಿ
![PAK IND](https://urtv24.com/wp-content/uploads/2023/02/PAK-IND-1024x569.jpg)
ಲಾಹೋರ್: ಭಾರತ ಮತ್ತು ಪಾಕಿಸ್ಥಾನ ನಡುವಿನ ಏಷ್ಯಾ ಕಪ್ ವಿವಾದ ಅಂತ್ಯ ಕಾಣುವ ಲಕ್ಷಣ ಕಾಣುತ್ತಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯ ಹೊರತಾಗಿಯೂ, ಪಂದ್ಯಾವಳಿಯ ಭವಿಷ್ಯವು ಇನ್ನೂ ಅತಂತ್ರವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಲು ಸಿದ್ಧವಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಕೂಟವೀಗ ತಟಸ್ಥ ಸ್ಥಳಕ್ಕೆ ಶಿಫ್ಟ್ ಆಗಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಭಾರತದ ವಿರುದ್ಧ ಕಟುವಾದ ಟೀಕೆ ಮಾಡಿದ್ದಾರೆ. ಅಲ್ಲದೆ ತಂಡವನ್ನು ತೆಗೆದು ಹಾಕಬೇಕು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಮನವಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಸೋಲನ್ನು ಅನುಭವಿಸುವ ಸಂದರ್ಭದಲ್ಲಿ ಸಾರ್ವಜನಿಕರ ವಿಪರೀತ ವರ್ತನೆಗೆ ಹೆದರಿ ಭಾರತವು ಬರಲು ಸಿದ್ಧರಿಲ್ಲ ಎಂದು ಮಿಯಾಂದಾದ್ ಹೇಳಿದರು.
“ನಾನು ಮತ್ತೆ ಹೇಳುತ್ತೇನೆ, ಭಾರತ ಬರದಿದ್ದರೆ ನಾವು ಹೆದರುವುದಿಲ್ಲ. ನಮಗೆ ನಮ್ಮ ಕ್ರಿಕೆಟ್ ಸಿಗುತ್ತಿದೆ. ವಿಷಯಗಳನ್ನು ನಿಯಂತ್ರಿಸುವ ಕೆಲಸ ಐಸಿಸಿಯದ್ದು, ಇಲ್ಲದಿದ್ದರೆ ಅದು ಆಡಳಿತ ಮಂಡಳಿಯನ್ನು ಹೊಂದಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಐಸಿಸಿ ಪ್ರತಿ ದೇಶಕ್ಕೂ ಒಂದು ನಿಯಮವನ್ನು ಹೊಂದಿರಬೇಕು. ಅಂತಹ ತಂಡಗಳು ಬರದಿದ್ದರೆ, ಅವರು ಎಷ್ಟೇ ಬಲಶಾಲಿಯಾಗಿದ್ದರೂ, ನೀವು ಅವರನ್ನು ತೆಗೆದುಹಾಕಬೇಕು”ಎಂದು ಮಿಯಾಂದಾದ್ ಹೇಳಿದರು.