ಬೆಳ್ತಂಗಡಿ: ಬಾಲಕಿ ಮೇಲೆ ಅತ್ಯಾಚಾರ, ಗರ್ಭಪಾತ ಪ್ರಕರಣ - ಆರೋಪಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ, ಜ 18 : ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಧೀರ್ ಜೋಗಿ ಎಂದು ಗುರುತಿಸಲಾಗಿದೆ.
2021ರ ಡಿಸೆಂಬರ್ 26ರಂದು ಟಿವಿ ನೋಡಲು ತನ್ನ ಮನೆಗೆ ಬರುತ್ತಿದ್ದ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದು ಬಳಿಕ ಗರ್ಭಪಾತ ನಡೆಸಿದ್ದಾನೆ. ಈತನಿಗೆ ಹಲವರು ಸಾಥ್ ನೀಡಿದ್ದರು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇನ್ನು ಪೊಲೀಸರು ಪೋಕ್ಸೋ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ಪ್ರಕರಣದ ಮೂರನೇ ಆರೋಪಿ ಮನೋಹರ (23) ಮತ್ತು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ನಾಲ್ಕನೇ ಆರೋಪಿ ಮಾಧವ ಯಾನೆ ಮಾಧು(30) ಎಂಬವರನ್ನು ಜನವರಿ 7ರಂದು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಪ್ರಮುಖ ಆರೋಪಿ ಕಡಿರುದ್ಯಾವರ ಗ್ರಾಮದ ಕೊಪ್ಪದಗುಂಡಿ ನಿವಾಸಿ ಸುಧೀರ್ ಜೋಗಿ (27) ಎಂಬವನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ.