ಬೆತ್ತಲೆ ಚಿತ್ರ ತೋರಿಸಿ ಬಾಲಕಿಗೆ ಬ್ಲ್ಯಾಕ್ಮೇಲ್ : ಯುವಕನ ಹತ್ಯೆ
ನಂಜನಗೂಡು : ಯುವತಿಯ ಬೆತ್ತಲೆ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಆಕೆಯ ಸಹೋದರ ತನ್ನ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿ ನದಿಗೆ ಬಿಸಾಡಿದ್ದಾನೆ. ಪ್ರಕರಣ ಭೇದಿಸಿರುವ ಮೈಸೂರು ಜಿಲ್ಲೆಯ ಬಿಳಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಚಂದ್ರಗೌಡ(25) ಮೃತ ಯುವಕ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬಿಳಿಗೆರೆಹುಂಡಿ ಗ್ರಾಮದ ಲಿಂಗರಾಜು ಹಾಗೂ ಎರಗನಹುಂಡಿ ಗ್ರಾಮದ ಕಿರಣ್ ಬಂಧಿತ ಆರೋಪಿಗಳು. ಹತ್ಯೆಯಾದ ಚಂದ್ರಗೌಡ ಸೋದರಿ ಸಂಬಂಧಿ ಹುಡುಗಿ ಹಾಗೂ ಕೊಲೆ ಆರೋಪಿ ಲಿಂಗರಾಜು ಸಹೋದರಿ ವಸತಿ ಶಾಲೆಯೊಂದರಲ್ಲಿ ಸಹಪಾಠಿಗಳು. ಸಹೋದರಿಯ ಮೊಬೈಲ್ನಲ್ಲಿ ಬಾಲಕಿಯ ಮೊಬೈಲ್ ನಂಬರ್ ತೆಗೆದುಕೊಂಡ ಚಂದ್ರಗೌಡ ಆಕೆಯೊಂದಿಗೆ ವಿಶ್ವಾಸ ಬೆಳೆಸಿ ಬಳಿಕ ಆಕೆಗೆ ನಗ್ನ ಫೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ.
ವಿಷಯ ತಿಳಿದ ಲಿಂಗರಾಜು, ಚಂದ್ರ ಗೌಡನಿಗೆ ತನ್ನ ಸಹೋದರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಪುಸಲಾಯಿಸಿ ಕರೆಸಿಕೊಂಡಿದ್ದಾನೆ. ನಂಜನ ಗೂಡು ತಾಲೂಕಿನ ತಾಯೂರು ಗೇಟ್ ಬಳಿ 2022 ನ.20ರಂದು ಚಂದ್ರಗೌಡನಿಗೆ ಮದ್ಯ ಕುಡಿಸಿ ಕೊಂದು ಗೋಣಿ ಚೀಲದಲ್ಲಿ ಮೃತದೇಹವನ್ನು ಹಾಕಿ ಕಾವೇರಿಯ ನದಿಗೆ ಎಸೆದಿದ್ದ.