ಬೆಂಗಳೂರು: ಹೆಲ್ಮೆಟ್ ಹಾಕದ ಮಹಿಳಾ ಪಿಎಸ್‌ಐಗೆ 500 ದಂಡ..!
ಬೆಂಗಳೂರು(ಮೇ.19): ಹೆಲ್ಮೆಟ್ ಹಾಕದೆ ಚೀತಾ ವಾಹನದಲ್ಲಿ ತಮ್ಮ ಸಹೋದ್ಯೋಗಿ ಜತೆ ತೆರಳುತ್ತಿದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ಗೆ 500 ದಂಡ ಬಿದ್ದಿದೆ.
ಎರಡು ದಿನಗಳ ಹಿಂದೆ ಕ್ವೀನ್ಸ್ ರಸ್ತೆಯಿಂದ ಎಂ.ಜಿ.ರಸ್ತೆ ಕಡೆಗೆ ಠಾಣೆಯ ಚೀತಾ ವಾಹನದಲ್ಲಿ ಅವರು ತೆರಳುವಾಗ ನಿಯಮ ಉಲ್ಲಂಘಿಸಿದ್ದರು ಎಂದು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಎಂ.ಜಿ.ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ ಚೀತಾ ವಾಹನದಲ್ಲಿ ಪಿಎಸ್‌ಐ ಲಕ್ಷ್ಮಿ ಕುಳಿತಿರುವ ಫೋಟೋವನ್ನು ಕ್ಲಿಕ್ಕಿಸಿ ಸಂಚಾರ ಪೊಲೀಸರಿಗೆ ನಾಗರಿಕ ಮಂಜೇಗೌಡ ಟ್ವೀಟ್ ಮಾಡಿದ್ದರು. ಮೇ 16ರ ಸಂಜೆ 4 ಗಂಟೆಯ ವೇಳೆ ಪೋಟೋ ಟ್ವೀಟ್ ಮಾಡಿದ್ದ ಆತ, ಸ್ವಿಗ್ಗಿ, ಝೋಮ್ಯಾಟೊ ಹಾಗೂ ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರ ಪೊಲೀಸರು, ನೋಂದಣಿ ಸಂಖ್ಯೆ ಆಧರಿಸಿ ವಾಹನವನ್ನು ಪತ್ತೆ ಹಚ್ಚಿ 500 ರು ದಂಡ ಹಾಕಿದ್ದಾರೆ. ಇದೇ ದ್ವಿಚಕ್ರ ವಾಹನವು 1,700 ರು ಹಳೆ ಸಂಚಾರ ದಂಡ ಬಾಕಿ ಉಳಿಸಿಕೊಂಡಿರುವ ಸಂಗತಿ ಪತ್ತೆಯಾಗಿದೆ.