ಬಿಜೆಪಿ ವಿರುದ್ಧ ಅಪಪ್ರಚಾರ ಪ್ರಕರಣ; ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿಗೆ ಜಾಮೀನು ಮಂಜೂರು.!
ವಿಧಾನಸಭೆ ಚುನಾವಣೆ (Vidhan Sabha Election) ವೇಳೆ ಬಿಜೆಪಿ (BJP) ವಿರುದ್ಧ 40% ಸರ್ಕಾರ ಎಂದು ಅಪಪ್ರಚಾರ ಮಾಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandi) ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ಶ್ಯೂರಿಟಿ ಸಲ್ಲಿಸಿದ್ದಾರೆ. ವಿಚಾರಣೆ ಜೂನ್ 30ಕ್ಕೆ ಮುಂದೂಡಲಾಗಿದೆ
ಏನಿದು ಪ್ರಕರಣ?
2023 ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಅಂದಿನ ಆಡಳಿತಾರೂಢ ಬಿಜೆಪಿಯನ್ನು ಭ್ರಷ್ಟ ಎಂದು ಲೇಬಲ್ ಮಾಡುವ ಜಾಹೀರಾತುಗಳನ್ನು ಪ್ರಕಟಿಸಿತ್ತು. 40 ಪರ್ಸೆಂಟ್ ಕಮಿಷನ್ ಆರೋಪದ ಜಾಹೋರಾತುಗಳನ್ನು ಪ್ರಕಟಿಸಿತ್ತು. ಇದರ ವಿರುದ್ಧ ಬಿಜೆಪಿಯ ಕರ್ನಾಟಕ ಘಟಕ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಇಂದು (ಜೂ.07) ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಇಂದು ಬೆಳಗ್ಗೆ 9:15ರ ಸುಮಾರಿಗೆ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಬಳಿಕ ನಾಯಕರು ಒಂದೇ ಕಾರಿನಲ್ಲಿ ಶಾಂಘ್ರಿಲಾ ಹೋಟೆಲ್ಗೆ ತೆರಳಿ ಉಪಹಾರ ಸೇವಿಸಿದರು. ಉಹಾರ ಬಳಿಕ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
ಜಾಮೀನು ಮಂಜೂರು ಆಗುತ್ತಿದ್ದಂತೆ ಸಂಸದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿದರು. ಕಚೇರಿಯಲ್ಲಿ ಕಾಂಗ್ರೆಸ್ನ ನೂತನ ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಜೆ ಜಾರ್ಜ್, ಭೈರತಿ ಸುರೇಶ್, ದಿನೇಶ್ ಗುಂಡೂರಾವ್ ಸೇರಿ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದಾರೆ.