- ಕ್ರೀಡೆ
- 6:41 ಅಪರಾಹ್ನ
- ಜನವರಿ 8, 2023
‘ಬಾರಿ ಎಡ್ಡೆ ಗೊಬ್ಬಿಯ’ ಸೂರ್ಯ ಎಂದ ರಾಹುಲ್ ; 'ಚೂರ್ ತುಳು ಕಲ್ಪಾವೊಡು ಆರೆಗ್ ನನ' ಎಂದ ದೀವಿಶಾ ಶೆಟ್ಟಿ

ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶನಿವಾರ ಸಿಕ್ಸ್ಗಳ ಸುರಿಮಳೆಯಾಗಿತ್ತು. ಹೀಗೆ ಸಿಕ್ಸ್-ಫೋರ್ಗಳ ಮೂಲಕ ಅಬ್ಬರಿಸಿದ್ದು ಮತ್ಯಾರೂ ಅಲ್ಲ, ಕ್ರಿಕೆಟ್ ಅಂಗಳದ ಹೊಸ 360 ಡಿಗ್ರಿ ಸೂರ್ಯಕುಮಾರ್ ಯಾದವ್. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯ ಅಕ್ಷರಶಃ ಅಬ್ಬರಿಸಿ ಶ್ರೀಲಂಕಾ ಬೌಲರ್ಗಳ ಬೆಂಡೆತ್ತಿದ್ದರು.
ಪರಿಣಾಮ ಕೇವಲ 45 ಎಸೆತಗಳಲ್ಲಿ ಸ್ಪೋಟಕ ಶತಕ ಮೂಡಿಬಂತು. ಈ ಸೆಂಚುರಿ ಬಳಿಕ ಕೂಡ ಆರ್ಭಟ ಮುಂದುವರೆಸಿದ ಸೂರ್ಯಕುಮಾರ್ ಯಾದವ್ ಅಂತಿಮವಾಗಿ 51 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 112 ರನ್ ಚಚ್ಚಿದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ವೇಗದ ಟಿ20 ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಅದು ಕೂಡ ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಸೂರ್ಯನ ಈ ಸಿಡಿಲಬ್ಬರನ್ನು ಕೆಎಲ್ ರಾಹುಲ್ ಕೂಡ ಹೊಗಳಿರುವುದು ವಿಶೇಷ. ಅದು ಕೂಡ ಸ್ಥಳೀಯ ಭಾಷೆ ತುಳುವಿನಲ್ಲೇ ಶ್ಲಾಘಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮಂಗಳೂರು ಮೂಲದ ಕೆ.ಎಲ್ ರಾಹುಲ್ ಬಾರಿ ಎಡ್ಡೆ ಗೊಬ್ಬಿಯ ಸೂರ್ಯ (ತುಂಬಾ ಚೆನ್ನಾಗಿ ಆಟವಾಡಿದೆ) ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೂಲಭಾಷೆ ತುಳುವಿನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ಸೂರ್ಯಕುಮಾರ್ ಯಾದವ್ ಅವರ ಪತ್ನಿ ಕರಾವಳಿ ಮೂಲದವರಾದ ದೀವಿಶಾ ಶೆಟ್ಟಿ, ಚೂರ್ ತುಳು ಕಲ್ಪಾವೊಡು ಆರೆಗ್ ನನ (ಇನ್ನು ಸ್ವಲ್ಪ ತುಳು ಕಲಿಸಬೇಕು ಅವರಿಗೆ) ಎಂದು ರಾಹುಲ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಈ ಪೋಸ್ಟ್ ಇದೀಗ ತುಳುನಾಡಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಹುಲ್ ಮತ್ತು ದೀವಿಶಾ ಅವರ ತುಳು ಪ್ರೇಮಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಅವರ ಮಗಳು ತುಳುವಿನಲ್ಲಿ ಮಾತನಾಡುವ ವೀಡಿಯೋ ಒಂದು ವೈರಲ್ ಆಗಿತ್ತು.