ಬಾಡಿಗೆ ಹೆಲಿಕಾಪ್ಟರ್ಗಳಿಗೆ ಭಾರೀ ಡಿಮ್ಯಾಂಡ್: ಚುನಾವಣಾ ಕಾರ್ಯಕ್ಕೆ ತಿಂಗಳುಗಟ್ಟಲೆ ಬುಕಿಂಗ್
ಬೆಂಗಳೂರು (ಫೆ.22): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ಗಳಿಗೆ ಭಾರಿ ಪ್ರಮಾಣದಲ್ಲಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳ ನಾಯಕರು ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅನುಕೂಲ ಆಗುವಂತೆ ತಿಂಗಳುಗಟ್ಟಲೆ ಬಾಡಿಗೆಗೆ ಹೆಲಿಕಾಪ್ಟರ್ ಬುಕ್ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ 2 ಪ್ರಮುಖ ಕಂಪನಿಗಳಿಂದ ಹೆಲಿಕಾಪ್ಟರ್ಗಳನ್ನು ಬುಕಿಂಗ್ ಮಾಡಲಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರು ಎರಡು ಕಂಪನಿಗಳ ಪ್ರತಿನಿಧಿಗಳ ಜೊತೆಗೆ ಮಾತುಕತೆಯನ್ನು ಮಾಡಿದ್ದಾರೆ. ಒಬ್ಬೊಬ್ಬ ನಾಯಕರು ಬರೋಬ್ಬರಿ ಒಂದು ತಿಂಗಳಿಗೆ ಹೆಲಿಕಾಪ್ಟರ್ಗಳನ್ನು ಬುಕ್ ಮಾಡುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಂದಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಾಯಕರ ಡಿಮ್ಯಾಂಡ್ ಗೆ ತಕ್ಕಂತೆ ಹೆಲಿಕಾಪ್ಟರ್, ಮಿನಿ ವಿಮಾನಗಳ ಪೂರೈಕೆ ಮಾಡಲಾಗುತ್ತಿದೆ.
ಸಾಮಾನ್ಯ ದರಕ್ಕಿಂತ ಶೇ.10 ದರ ಹೆಚ್ಚಳ: ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್, ಮಿನಿ ವಿಮಾನಗಳ ದರಗಳಲ್ಲಿಯೂ ಭಾರಿ ಪ್ರಮಾಣದ ಏರಿಕೆ ಕಂಡುಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಮಾನಯಾನ ಕಂಪನಿಗಳು ಹಾಲಿ ದರಕ್ಕಿಂತ ಶೇ.10 ದರ ಏರಿಕೆ ಮಾಡಲಾಗುತ್ತಿದೆ. ಪ್ರತಿ ಗಂಟೆಗೆ ನಿಗದಿಯಾಗಿರುವ ದರದಲ್ಲಿ ಭಾರೀ ಬದಲಾವಣೆ ಮಾಡಿರುವುದು ಕಂಡುಬರುತ್ತಿದೆ. ಇನ್ನು ವಿಮಾನವನ್ನು ಬಾಡಿಗೆ ನೀಡುವ ವೇಳೆ ಪ್ರತಿ ಗಂಟೆ ಹಾರಾಟದ ಲೆಕ್ಕಾಚಾರದಲ್ಲಿ ದರ ನಿಗದಿ ಮಾಡಲಾಗುತ್ತದೆ. ಬಾಡಿಗೆದಾರರು ಹಾರಾಟ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಬೇಕಿದೆ.
ಹಾರಾಟದ ಅವಧಿಗೆ ತಕ್ಕಂತೆ ಬಾಡಿಗೆ ನಿಗದಿ ಮಾಡುವ ವಿಮಾನಯಾನ ಕಂಪನಿಗಳು, ಬಾಡಿಗೆಯ ಜೊತೆಗೆ ಇತರ ನಿರ್ವಹಣಾ ವೆಚ್ಚವನ್ನು ಕೂಡ ಬಾಡಿಗೆದಾರರಿಂದ ಪಾವತಿಸಿಕೊಳ್ಳುತ್ತವೆ. ಲ್ಯಾಂಡಿಂಗ್ ಮತ್ತು ಟೆಕ್ ಅಪ್ ಗಳು ಹೆಚ್ಚಾದರೆ ದರದಲ್ಲಿ ವ್ಯತ್ಯಾಸವನ್ನು ಮಾಡಲಾಗುತ್ತದೆ. ಇನ್ನು ವೇಟಿಂಗ್ (ಕಾಯುವಿಕೆ) ಚಾರ್ಜಗಳಿಗೆ ವಿಮಾನ ಕಂಪನಿಗಳಿಂದ ವಿನಾಯಿತಿ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಪೈಲಟ್ ಗಳ ಉಟೋಪಚಾರದ ವೆಚ್ಚ ಪ್ರತ್ಯೇಕವಾಗಿ ಪಾವತಿಸಿಕೊಳ್ಳಲಾಗುತ್ತದೆ. ಜೊತೆಗೆ, ಹೆಲಿಕಾಪ್ಟರ್ ಮತ್ತು ವಿಮಾನಗಳ ಪಾರ್ಕಿಂಗ್ ಶುಲ್ಕವೂ ಪ್ರತ್ಯೇಕವಾಗಿರುತ್ತದೆ.