- ಕ್ರೀಡೆ
- 9:38 ಫೂರ್ವಾಹ್ನ
- ಮೇ 26, 2023
ಪ್ರೊ ಲೀಗ್ ಹಾಕಿ : ಇಂದು ಭಾರತ- ಬೆಲ್ಜಿಯಂ ಮುಖಾಮುಖಿ

ಲಂಡನ್: 2022-23ರ ಆವೃತ್ತಿಯ ಪುರುಷರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಭಾರತ ಹಾಗೂ ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಈ ಬಾರಿ ಉತ್ತಮ ಆರಂಭ ಪಡೆದಿದ್ದು, 8 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 19 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ.
ಆದರೆ ಕಳೆದ ಬಾರಿ ರನ್ನರ್-ಅಪ್ ಸ್ಥಾನಿಯಾಗಿದ್ದ ಬೆಲ್ಜಿಯಂ ಟೂರ್ನಿಯಲ್ಲಿ ಈವರೆಗೆ 4 ಪಂದ್ಯಗಳನ್ನಾಡಿದ್ದು, ಕೇವಲ 6 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಕಳೆದ ವರ್ಷ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಭಾರತ 1ರಲ್ಲಿ ಸೋತು, ಮತ್ತೊಂದು ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.
ಬೆಲ್ಜಿಯಂಗೆ ತಾರಾ ಆಟಗಾರರ ಅನುಪಸ್ಥಿತಿ: ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಂ ತಂಡವು ಈ ಬಾರಿ ತಾರ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ವಿನ್ಸೆಂಟ್ ವೆನಾಶ್, ಆರ್ಥರ್ ವ್ಯಾನ್ ಡುರೇನ್, ಅಲೆಕ್ಸಾಂಡರ್ ಹೆಂಡ್ರಿಕ್ಸ್, ಫ್ಲೋರೆಂಟ್ ವ್ಯಾನ್ ಆಬುಲ್, ಸೆಬಾಸ್ಟಿನ್ ಡೋಕಿಯರ್ ಇನ್ನೂ ಕ್ಲಬ್ ಪಂದ್ಯಗಳನ್ನು ಆಡುತ್ತಿರುವುದರಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.