- ಸಿನೆಮಾ
- 12:23 ಅಪರಾಹ್ನ
- ಜನವರಿ 10, 2023
ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹೇಳಿರುವ ಮಂಗ್ಲಿ, ಇದೀಗ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈ ಗಾಯಕಿ, ಮೊದಲ ಬಾರಿಗೆ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದಾರೆ. ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನದಲ್ಲಿ ಮೂಡಿ ಬರಲಿರುವ ಪಾದರಾಯ ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸದ್ಯ ವೇದ ಸಿನಿಮಾದ ‘ಗಿಲ್ಲಕ್ಕೋ’ ಹಾಡಿನ ಮೂಲಕ ಮನೆಮಾತಾಗಿರುವ ಮಂಗ್ಲಿ, ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್, ರಾಬರ್ಟ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಅಷ್ಟೂ ಹಾಡುಗಳು ಸೂಪರ್ ಹಿಟ್ ಎನ್ನುವುದು ವಿಶೇಷ. ಇದೇ ಮೊದಲ ಬಾರಿಗೆ ಅವರು ನಾಯಕಿಯಾಗಿ ನಟಿಸುತ್ತಿದ್ದು, ನಾಗಶೇಖರ್ ಈ ಸಿನಿಮಾದ ನಾಯಕ.
ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, 2013-14ರಲ್ಲಿ ನಡೆದ ಘಟನೆಯನ್ನು ಚಿತ್ರವಾಗಿಸುತ್ತಿದ್ದಾರೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ. ಈ ಘಟನೆಯು ಆರು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ಅವರು, ಈ ಚಿತ್ರಕ್ಕೆ ಪಾದರಾಯ ಎಂದು ಹೆಸರಿಡುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ.
ಈಗಾಗಲೇ ಪಾತ್ರಕ್ಕಾಗಿ ನಾಗಶೇಖರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಯಾರಿಗಾಗಿಯೇ ಅವರು ಹಲವು ದಿನಗಳಿಂದ ಅಂಜನಾದ್ರಿ ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರಂತೆ. ಈ ಬೆಟ್ಟದಲ್ಲಿ ನಡೆಯುವ ಪೂಜ ಪುನಸ್ಕಾರಗಳಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ, ಹನುಮನ ಮಾಲೆಯನ್ನೂ ಧರಿಸಿ, ಅಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರಂತೆ.