ದೇಶದ ನೌಕಾಪಡೆ ಬತ್ತಳಿಕೆಗೆ ‘ಐಎನ್‌ಎಸ್ ವಾಗೀರ್’ ಜಲಾಂತರ್ಗಾಮಿ ಬಲ! ರಹಸ್ಯವಾಗಿ ಎದುರಾಳಿ ಪಡೆಗಳನ್ನು ನಾಶಗೊಳಿಸುವ ಸಾಮರ್ಥ್ಯ
ಮುಂಬೈ (ಜನವರಿ 24, 2023): ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟು ಅಲ್ಲಿ ತನ್ನ ಚಟುವಟಿಕೆಯನ್ನು ಚೀನಾ ತೀವ್ರಗೊಳಿಸಿರುವಾಗಲೇ, ಭಾರತೀಯ ಸೇನೆಗೆ ಪ್ರಬಲ ಅಸ್ತ್ರವೊಂದು ಸೇರ್ಪಡೆಯಾಗಿದೆ. ‘ಐಎನ್‌ಎಸ್ ವಾಗೀರ್’ ಎಂಬ ಜಲಾಂತರ್ಗಾಮಿ ನೌಕೆ (ಸಬ್ ಮರೀನ್) ಸೋಮವಾರ ನೌಕಾಪಡೆ ಸೇವೆಗೆ ಸಮರ್ಪಣೆಯಾಗಿದೆ. ರಹಸ್ಯವಾಗಿ ಎದುರಾಳಿ ಪಡೆಗಳನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿರುವ ಈ ಸಬ್ ಮರೀನ್‌ನಿಂದಾಗಿ ಭಾರತೀಯ ನೌಕಾಪಡೆಯ ಬಲ ಮತ್ತಷ್ಟು ವೃದ್ಧಿಯಾದಂತಾಗಿದೆ. ವಿಶೇಷ ಎಂದರೆ, ಕಳೆದ 24 ತಿಂಗಳ ಅವಧಿಯಲ್ಲಿ ನೌಕಾಪಡೆ ಸೇರುತ್ತಿರುವ ಮೂರನೇ ಜಲಾಂತರ್ಗಾಮಿ ನೌಕೆ ಇದು. ಫ್ರಾನ್ಸ್‌ನಿಂದ ತಂತ್ರಜ್ಞಾನ ವರ್ಗಾಯಿಸಿಕೊಂಡು ಮುಂಬೈನ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಸಂಸ್ಥೆ ಈ ನೌಕೆಯನ್ನು ನಿರ್ಮಾಣ ಮಾಡಿದೆ.
‘ವಾಗೀರ್’ (Vagir) ಎಂದರೆ ಸಮುದ್ರ ಜೀವಿಯಾಗಿರುವ ಸ್ಯಾಂಡ್ ಶಾರ್ಕ್ ಎಂದರ್ಥ. ಈ ನೌಕೆ 220 ಅಡಿ ಉದ್ದ, 40 ಅಡಿ ಎತ್ತರವಿದೆ. ನೀರಿನೊಳಗೆ (Under Water) ಸೇರಿದರೆ 50 ದಿನ ಮೇಲೆ ಬರದೆ ಚಲಿಸಬಲ್ಲದು. ನೌಕಾಪಡೆ ಮುಖ್ಯಸ್ಥ (Chief of the Naval Staff) ಅಡ್ಮಿರಲ್ ಆರ್. ಹರಿಕುಮಾರ್ (Admiral R . Harikumar) ಸಮ್ಮುಖ ಈ ನೌಕೆಯನ್ನು ಸೇವೆಗೆ ಸೇರಿಸಿಕೊಳ್ಳಲಾಗಿದೆ. ಈ ನೌಕೆ ಮಾರಕ ವೇದಿಕೆಯಾಗಿದ್ದು, ಬಲಿಷ್ಠ ಶಸ್ತ್ರಾಸ್ತ್ರಗಳು, ಕಣ್ತಪ್ಪಿಸಿ ದಾಳಿ ನಡೆಸುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇದರಿಂದ ನೌಕಾಪಡೆಯ ದಾಳಿ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ಹರಿಕುಮಾರ್ ತಿಳಿಸಿದ್ದಾರೆ.
ಫ್ರಾನ್ಸ್ (France) ಜತೆ ಒಪ್ಪಂದ ಮಾಡಿಕೊಂಡು ಮುಂಬೈನಲ್ಲಿ ಒಟ್ಟು 6 ಸಬ್ ಮರೀನ್‌ಗಳನ್ನು (Sub Marines) ನಿರ್ಮಾಣ ಮಾಡಲು ಭಾರತ ಉದ್ದೇಶಿಸಿದೆ. ಆ ಪೈಕಿ ವಾಗೀರ್ ಐದನೆಯದ್ದು. ಮತ್ತೊಂದು ಮುಂದಿನ ವರ್ಷ ಸೇವೆಗೆ ದೊರೆಯಲಿದೆ. 1973ರಿಂದ 2001ರವರೆಗೆ ಭಾರತೀಯ ನೌಕಾಪಡೆಯಲ್ಲಿ ವಾಗೀರ್ ಎಂಬ ಸಬ್‌ಮರೀನ್ ಸೇವೆ ಸಲ್ಲಿಸಿತ್ತು. ಇದೀಗ ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆ.
ವಾಗೀರ್ ವೈಶಿಷ್ಟ್ಯ
2009ರಿಂದ ವಾಗೀರ್ ನೌಕೆಯ ನಿರ್ಮಾಣ ಆರಂಭವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಅದು ಮೊದಲ ಸಂಚಾರ ಆರಂಭಿಸಿತ್ತು. 11 ತಿಂಗಳ ಕಾಲ ಸಮುದ್ರ ಯಾನ ನಡೆಸಿತ್ತು. 2022ರ ಡಿಸೆಂಬರ್‌ನಲ್ಲಿ ನೌಕಾಪಡೆಗೆ ಹಸ್ತಾಂತರ ಮಾಡಲಾಗಿತ್ತು. ಸಮುದ್ರದಾಳದಿಂದ ನೆಲದ ಮೇಲಿನ ಗುರಿಗಳಿಗೆ ದಾಳಿ ನಡೆಸಲು, ಸಬ್ ಮರೀನ್‌ಗಳ ಮೇಲೆ ಎರಗಲು, ಗುಪ್ತಚರ ಮಾಹಿತಿ ಸಂಗ್ರಹಿಸಲು, ಬಾಂಬ್ ಇಡಲು, ಸರ್ವೇಕ್ಷಣೆ ಸೇರಿ ಹಲವು ಕೆಲಸಗಳಿಗೆ ಈ ನೌಕೆ ಉಪಯೋಗಕ್ಕೆ ಬರಲಿದೆ.