- ಅಂತಾರಾಷ್ಟ್ರೀಯ
- 2:50 ಅಪರಾಹ್ನ
- ಜನವರಿ 6, 2023
ದೇವಾಲಯಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ – ತರಬೇತಿ ಪಡೀತಿದ್ದ ಪೈಲಟ್ ಸಾವು

ಭೋಪಾಲ್: ತರಬೇತಿ ವಿಮಾನವೊಂದು (Training Plane) ಶುಕ್ರವಾರ ಮುಂಜಾನೆ ದೇವಾಲಯವೊಂದಕ್ಕೆ (Temple) ಅಪ್ಪಳಿಸಿ ಪತನವಾಗಿರುವ (Plane Crash) ಘಟನೆ ಮಧ್ಯಪ್ರದೇಶದ (Madhya Pradesh) ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿ ನಡೆದಿದೆ. ವಿಮಾನ ಪತನದಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ (Pilot) ಸಾವನ್ನಪ್ಪಿದ್ದಾರೆ.
ಖಾಸಗಿ ಕಂಪನಿಗೆ ಸೇರಿದ ವಿಮಾನ ಡುಮ್ರಿ ಗ್ರಾಮದ ದೇವಾಲಯದ ಗೋಪುರಕ್ಕೆ ಅಪ್ಪಳಿಸಿದ್ದರಿಂದ ಅಪಘಾತ ಸಂಭವಿಸಿದೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು, ಒಬ್ಬ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ರೇವಾ ಎಸ್‌ಪಿ ನವನೀತ್ ಭಾಸಿನ್ ಮಾಹಿತಿ ನೀಡಿದ್ದು, ಶುಕ್ರವಾರ ಮುಂಜಾನೆ ದುರ್ಘಟನೆ ನಡೆದಿದೆ. ಅಪಘಾತಕ್ಕೊಳಗಾದ ವಿಮಾನ ತರಬೇತಿ ವಿಮಾನವಾಗಿದ್ದು, ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಪೈಲಟ್ ಅನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಅಪಘಾತಕ್ಕೆ ಕಾರಣ ಹವಾಮಾನ ವೈಪರೀತ್ಯ ಎನ್ನಲಾಗಿದೆ. ಮಂಜು ಮುಸುಕಿದ ವಾತಾವರಣದಿಂದ ದಾರಿ ಸರಿಯಾಗಿ ಕಾಣಿಸದೇ ವಿಮಾನ ದೇವಾಲಯಕ್ಕೆ ಅಪ್ಪಳಿಸಿದೆ ಎಂದು ಶಂಕಿಸಲಾಗಿದೆ.