ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!

ಆನೇಕಲ್: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy Murder) ನಟ ದರ್ಶನ್ (Actor Darshan) ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಹೊತ್ತಿನಲ್ಲಿಯೇ, ದರ್ಶನ್‌ಗೇ ಸಂಬಂಧಿಸಿದ ಇನ್ನೊಂದು ಅನುಮಾನಾಸ್ಪದ ಸಾವು (UDR case) ಬಯಲಿಗೆ ಬಂದಿದೆ. ದರ್ಶನ್ ಫಾರಂ ಹೌಸ್ ಮ್ಯಾನೇಜರ್ (Darshan manager) ಆಗಿದ್ದ ಶ್ರೀಧರ್ ಎಂಬಾತ ಶಂಕಾಸ್ಪದವಾಗಿ ರಕ್ತ ಕಾರಿಕೊಂಡು ಸತ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀಧರ್ (35) ಆತ್ಮಹತ್ಯೆ (self harming) ಮಾಡಿಕೊಂಡ ಮ್ಯಾನೇಜರ್. ಏಪ್ರಿಲ್ 17ನೇ ತಾರೀಕು ಈತ ವಿಷ (poison) ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ಘಟನೆ ನಡೆದಿದೆ. ಬಗ್ಗನದೊಡ್ಡಿಯಲ್ಲಿ ನಟ ದರ್ಶನ್‌ಗೆ ಸೇರಿದ ʼದುರ್ಗ ಫಾರ್ಮ್ ಹೌಸ್ʼ ಇದ್ದು, ಅಲ್ಲಿ ಈತ ಮ್ಯಾನೇಜರ್ ಆಗಿದ್ದ. ಸಾವಿಗೆ ಮುನ್ನ ವಿಡಿಯೋ ಮಾಡಿದ್ದು, ಡೆತ್‌ನೋಟ್ ಕೂಡ ಬರೆದಿಟ್ಟಿದ್ದಾನೆ.
ಎರಡು ತಿಂಗಳ ಹಿಂದೆ ಈ ಆತ್ಮಹತ್ಯೆ ಘಟಿಸಿದ್ದು, ಪೊಲೀಸರು ಅನುಮಾನಾಸ್ಪದ ಸಾವು (UDR) ದಾಖಲಿಸಿಕೊಂಡಿದ್ದರು. ಫಾರ್ಮ್ ಹೌಸ್ ಪಕ್ಕದಲ್ಲಿಯೇ ಈತ ವಿಷ ಸೇವಿಸಿ ರಕ್ತ ಕಾರಿಕೊಂಡು ಮೃತಪಟ್ಟಿದ್ದಾನೆ. ಬಗ್ಗನದೊಡ್ಡಿಯಲ್ಲಿ ಸುಮಾರು 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಒಂದು ವರ್ಷ ಕಾಲ ಈತ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ. ಫಾರ್ಮ್ ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಶ್ರೀಧರ್ ಮೃತ ದೇಹ ಕಂಡು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ.
ಒಂದು ಡೆತ್ ನೋಟನ್ನೂ (Death note) ಶ್ರೀಧರ್ ಬರೆದಿಟ್ಟಿದ್ದಾನೆ. ತಾನು ಮಾನಸಿಕ ಖಿನ್ನತೆಗೊಳಗಾಗಿ ಸೂಸೈಡ್ ಮಾಡಿಕೊಳ್ಳುತ್ತಿರುವುದಾಗಿ ಅದರಲ್ಲಿ ಬರೆದಿದ್ದಾನೆ. “ನನ್ನ ಸಾವಿಗೆ ನಾನೇ ಕಾರಣ. ಒಂಟಿತನ ಕಾಡುತ್ತಿದೆ. ಬದುಕಿದ್ದು ಮನೆ ಕಟ್ಟಬೇಕು ಎಂದು ಆಸೆ ಇತ್ತು. ಆಗಲಿಲ್ಲ. ನಾನು ಸತ್ತಮೇಲೆ ನನ್ನ ಗೋರಿ ಆದರೂ ಕಟ್ಟಿ” ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಡೆತ್‌ನೋಟನ್ನು ಯಾವುದೇ ಚಿತ್ತು ಕಾಟಿಲ್ಲದೆ ಬರೆದು, ಹೆಸರು ಬರೆದು ಸಹಿ ಹಾಕಿ ಜೊತೆಗೆ ಹೆಬ್ಬೆಟ್ಟು ಗುರುತನ್ನೂ ಒತ್ತಿದ್ದಾನೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿದೆ.
“ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ” ಎಂದು ಮತ್ತೆ ಮತ್ತೆ ಡೆತ್‌ನೋಟ್‌ನಲ್ಲಿ ಶ್ರೀಧರ್ ಉಲ್ಲೇಖಿಸಿದ್ದಾನೆ. “ನನ್ನ ಅಮ್ಮ ಅಪ್ಪ ಅಕ್ಕಂದಿರು ಯಾರಾದರೂ ನನ್ನ ಸಾವಿನ ಬಗ್ಗೆ ಅನುಮಾನವಿದೆ ಎಂದು ಕಂಪ್ಲೇಂಟ್ ಕೊಟ್ಟರೆ ಅದನ್ನು ತಗೋಬೇಡಿ. ನಾನು ತುಂಬಾ ಯೋಚನೆ ಮಾಡಿ ನನ್ನ ಪ್ರಾಣ ಕಳೆದುಕೊಳ್ತಾ ಇದೇನೆ” ಎಂದು ಬರೆದಿದ್ದಾನೆ. ಇದೇ ಈಗ ಅನುಮಾನಕ್ಕೆ ಕಾರಣವಾಗಿದೆ. ದರ್ಶನ್ ಹೆಸರನ್ನು ಎಲ್ಲೂ ಈತ ಉಲ್ಲೇಖಿಸಿಲ್ಲ.
ಸಾಕ್ಷಿದಾರರಾಗಿ ಬಳಕೆ
ದರ್ಶನ್ ಆಂಡ್ ಗ್ಯಾಂಗ್‌ನಿಂದ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಲ್ಲದೇ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಹೇಳಿಕೆ ನೀಡಿದವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳು ಸೇರಿ 27ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ. 27 ಮಂದಿಯಲ್ಲಿ 17 ಮಂದಿ ಬಂಧಿತ ಆರೋಪಿಗಳು. ನಟ ದರ್ಶನ್, ಪವಿತ್ರ ಗೌಡ ಸೇರಿ 17 ಮಂದಿ ಬಂಧಿತ ಆರೋಪಿಗಳು. ಇನ್ನುಳಿದ 10 ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಸಾಕ್ಷಿಗಳು ಎಂದು ಈವರೆಗೆ 10 ಮಂದಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಘಟನಾ ಸ್ಥಳದಲ್ಲಿ ಹಾಜರಿದ್ದ ಕೆಲವರು, ಬೇರೆಬೇರೆ ಕಡೆಗಳಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಕಂಡು ಬಂದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ. ಅವರನ್ನು ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕ್ಷಿಗಳು ಎಂದು ಪರಿಗಣಿಸಿ ಹೇಳಿಕೆ ದಾಖಲು ಮಾಡಲಾಗಿದೆ. ಶೆಡ್ ಬಳಿ ಇದ್ದ ಇನ್ನೂ ಕೆಲವರ ಹೇಳಿಕೆ ಪಡೆದುಕೊಂಡಿದ್ದಾರೆ. ಘಟನೆ ಹೇಗಾಯ್ತು, ಯಾರು ಯಾರು ಇದ್ದರು, ಎಷ್ಟು ಜನ ಸೇರಿದ್ದರು, ದರ್ಶನ್ ಎಷ್ಟು ಹೊತ್ತಿಗೆ ಬಂದಿದ್ದು, ಯಾವಯಾವ ಆಯುಧಗಳಿಂದ ಹಲ್ಲೆ ಮಾಡಿದರು, ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿಕೆ ದಾಖಲಿಸಿದ್ದಾರೆ. ಶೆಡ್‌ನ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ದರ್ಶನ್ ಗ್ಯಾಂಗ್ ನಾಶ ಮಾಡಿರುವ ಹಿನ್ನೆಲೆಯಲ್ಲಿ, ಈ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಮಹತ್ವ ಪಡೆದುಕೊಳ್ಳಲಿದೆ.