ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್ (Darshan) ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 9ವರೆಗೆ ನ್ಯಾಯಾಂಗ ಬಂಧನ (Judicial Custody) ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ್ಯಾಯಾಂಗ ಬಂಧನ ಎದುರಿಸುತ್ತಿದೆ. ಅವರ ನ್ಯಾಯಾಂಗ ಅವಧಿ ಇಂದಿಗೆ (ಆಗಸ್ಟ್ 28) ಅಂತ್ಯಗೊಳ್ಳುವುದರಲ್ಲಿತ್ತು. ಹೀಗಾಗಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.
ನ್ಯಾಯಾಧೀಶರು ಆರಂಭದಲ್ಲಿ ಎಲ್ಲರ ಹಾಜರಾತಿ ಪಡೆದರು. ಆ ಬಳಿಕ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೈಲಲ್ಲಿ ಸಿಗರೇಟ್ ಸೇದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಪೊಲೀಸರು ವಿಚಾರಣೆ ಎದುರಿಸಲಿದ್ದಾರೆ. ಆ ಬಳಿಕ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ.
ಪ್ರಕರಣದ ಆರೋಪಿ ಪ್ರದೂಶ್ ಅವರನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇದನ್ನು ಮಾಡದಂತೆ ಅವರು ಕೊರಿದ್ದಾರೆ. ‘ನನ್ನ ತಂದೆಗೆ ಕ್ಯಾನ್ಸರ್ ಇದೆ. ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾಯರ್ ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಬೇಡಿ’ ಎಂದು ಪ್ರದೂಶ್ ಕೇಳಿಕೊಂಡಿದ್ದಾರೆ. ಆದರೆ, ಈ ಮನವಿಯನ್ನು ಜಡ್ಜ್ ತಿರಸ್ಕರಿಸಿದ್ದಾರೆ. ‘ಕಾನೂನಿನ ಪ್ರಕಾರ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಜಡ್ಜ್ ಹೇಳಿದ್ದಾರೆ.
ಸದ್ಯ ನ್ಯಾಯಾಂಗ ಬಂಧನ ವಿಸ್ತರಣೆಗೆ ನ್ಯಾಯಾಲಯಕ್ಕೆ ಪೊಲೀಸರು ಎಂಟು ಅಂಶಗಳ ಕಾರಣ ನೀಡಿದ್ದಾರೆ. ದರ್ಶನ್ ಅವರು ಮೃತನ ಕುಟುಂಬಕ್ಕೆ ಬೆದರಿಕೆ ಹಾಕಬಹುದು ಎಂದು ಪೊಲೀಸರು ಆತಂಕ ಹೊರಹಾಕಿದ್ದಾರೆ. ಈ ಕಾರಣಕ್ಕೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ.
ಪ್ರದೋಶ್ ಆರೋಪಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ‘ಹೊಸದಾಗಿ ಮೂರು ಕೇಸ್ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಕಾರಣದಿಂದ ಯಾರನ್ನೂ ಭೇಟಿ ಮಾಡಲು ಅವಕಾಶ ನೀಡಿಲ್ಲ. ಮುಂದೆ ನೀಡಲಾಗುತ್ತದೆ’ ಎಂದು ಜೈಲು ಅಧಿಕಾರಿಗಳು ಕೋರ್ಟ್ ಎದುರು ಮಾಹಿತಿ ನೀಡಿದ್ದಾರೆ.
ಬಾಡಿಗೆ ಕಟ್ಟದ ಅಂಚೆ ಕಚೇರಿಗಳಿಗೆ ಬೀಗ ಜಡಿದ BBMP: AAP ತೀವ್ರ ವಿರೋಧ
ಬೆಂಗಳೂರು: ನಗರದ ಸೇಂಟ್ ಜಾನ್ಸ್ ರಸ್ತೆ ಹಾಗೂ ವಸಂತನಗರದ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದು, ಕೂಡಲೇ ಅದನ್ನು ತೆರವು ಮಾಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಆಮ್ ಆದ್ಮಿ ಪಕ್ಷ ಬುಧವಾರ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಎಎಪಿ ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಬಿಬಿಎಂಪಿ ಕಟ್ಟಡದಲ್ಲಿರುವ ಅಂಚೆ ಕಚೇರಿಗಳು ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಕಾರಣ ನೀಡಿ ಅಧಿಕಾರಿಗಳು ಬಾಗಿಲು ಹಾಕಿಸುತ್ತಿರುವ ಕ್ರಮ ಖಂಡನೀಯ ಎಂದು ಕಿಡಿಕಾರಿದರು.
ಭಾರತೀಯ ಅಂಚೆ ಇಲಾಖೆ ಪ್ರಪಂಚದಲ್ಲೇ ಅತಿ ದೊಡ್ಡ ಸರ್ಕಾರಿ ಅಂಚೆ ಇಲಾಖೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದು ಭಾರತದ ಪರಂಪರೆ ಹಾಗೂ ಇತಿಹಾಸದ ಭಾಗವಾಗಿದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರಿಗೆ ಅಂಚೆ ಸೇವೆ ಒದಗಿಸುತ್ತಿದೆ. ಇಂತಹ ಸೇವಾ ವಲಯದ ಕಚೇರಿಯನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿರುವುದು ವಿಷಾದನೀಯ ಎಂದು ಹೇಳಿದರು.
ಅಂಚೆ ಕಚೇರಿಗಳ ಕಟ್ಟಡಗಳ ಮೇಲೆ ತೆರಿಗೆ ಹಾಕದೆ, ಶುಲ್ಕ ವಸೂಲಿ ಮಾಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಯಾರೋ ಉದ್ಯಮಿಗಳಿಗೆ, ಪ್ರಭಾವಿಗಳಿಗೆ, ರಾಜಕಾರಣಿಗಳಿಗೆ ಬೇಕಾದಷ್ಟು ಭೂಮಿ, ಕಟ್ಟಡಗಳನ್ನು ಧಾರೆಯೆರೆದು ಕೊಡುತ್ತಿರುವಾಗ ಜನಸಮಾನ್ಯರಿಗೆ ನೆರವಾಗುವ ಅಂಚೆ ಕಚೇರಿಗಳಿಂದ ಬಾಡಿಗೆ ತೆಗೆದುಕೊಳ್ಳದಿದ್ದರೆ ಸರ್ಕಾರಕ್ಕೆ ಅಂತಹ ದೊಡ್ಡ ನಷ್ಟವೇನೂ ಸಂಭವಿಸುವುದಿಲ್ಲ ಎಂದು ತಿಳಿಸಿದರು
ಕಲುಷಿತ ನೀರು ಕುಡಿದು 7 ಮಂದಿ ಅಸ್ವಸ್ಥ – ಹುಣಸಘಟ್ಟ PDO ಅಮಾನತು
ದಾವಣಗೆರೆ: ಕಲುಷಿತ ನೀರು (Contaminated Water) ಕುಡಿದು 7 ಮಂದಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನೆಲೆ ಹುಣಸಘಟ್ಟ (Hunasagatta) ಪಿಡಿಒ (PDO) ಪರಮೇಶ್ ಕಳ್ಳೂರು ಅವರನ್ನು ಅಮಾನತು ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಕಲುಷಿತ ನೀರು ಕುಡಿದು 7 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಓರ್ವ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಪಿಡಿಒ ಪರಮೇಶ್ ಅವರನ್ನು ಅಮಾನತು (Suspend) ಮಾಡಲಾಗಿದೆ.
ಕುಡಿಯುವ ನೀರಿನ ಪೈಪ್‌ನಲ್ಲಿ ಚರಂಡಿ ನೀರು ಸೇರಿಕೊಳ್ಳುತ್ತಿದ್ದರೂ ಪಿಡಿಒ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಪಿಡಿಒ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಬಿ ಇಟ್ನಾಳ್ ಆದೇಶ ಹೊರಡಿಸಿದ್ದಾರೆ.
ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್ ಶಿಫ್ಟ್:
ಬಳ್ಳಾರಿ ಜೈಲಿಗೆ (Ballari Jail) ದರ್ಶನ್ (Darshan) ಎರಡನೇ ಬಾರಿ ಹೋಗುತ್ತಿದ್ದಾರೆ. ಹೌದು. 2017ರಲ್ಲಿ ತೆರೆ ಕಂಡಿದ್ದ ಕನ್ನಡದ ಚೌಕ (Chowka) ಸಿನಿಮಾದ ಶೂಟಿಂಗ್ (Shooting) ಈ ಜೈಲಿನಲ್ಲಿ ನಡೆದಿತ್ತು. ಕೊನೆ ಭಾಗವನ್ನು ಜೈಲಿನಲ್ಲಿರುವ ಖಾಲಿ ಸೆಲ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.
ಈ ಚಿತ್ರದ ಶೂಟಿಂಗ್‌ಗಾಗಿ ದರ್ಶನ್ ಜೈಲಿಗೆ ಆಗಮಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ರಾಬರ್ಟ್ ಹೆಸರಿನ ಪಾತ್ರ ಮಾಡಿದ್ದರು. ಅಂದು ಶೂಟಿಂಗ್‌ಗಾಗಿ ಆಗಮಿಸಿದ್ದ ದರ್ಶನ್ ಈಗ ಅದೇ ಜೈಲಿನಲ್ಲಿ ಸೆರೆವಾಸಕ್ಕೆ ಆಗಮಿಸುತ್ತಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ವಿವಿಐಪಿ ಅತಿಥ್ಯ ಸಿಗಲು ಸಾಧ್ಯವಿಲ್ಲ. ಭೀಮಾ ತೀರದ ಹಂತಕರು, ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳು. ನಟೋರಿಯಸ್ ರೌಡಿಗಳನ್ನು ಇದೇ ಬಳ್ಳಾರಿ ಜೈಲಿಗೆ ತಂದು ಹಾಕಲಾಗಿತ್ತು. ಬಳ್ಳಾರಿ ಜೈಲಲ್ಲಿ ಯಾವುದೇ ವಿಲಾಸಿ ಜೀವನಕ್ಕೆ ಅವಕಾಶ ಇಲ್ಲ.
ಇಂದು ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರೆದುರು ಹಾಜರುಪಡಿಸಲಾಗುತ್ತದೆ. ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆಯಿದೆ.
ನ್ಯಾಯಾಧೀಶರು ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ ಬಳಿಕ ಮಧ್ಯಾಹ್ನ 1 ಗಂಟೆ ಬಳಿಕ ಬಿಗಿ ಭದ್ರತೆಯಲ್ಲಿ ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.