ಟೀಂ ಇಂಡಿಯಾ ತಂಡದ ಕೋಚ್ ಹುದ್ದೆಗಾಗಿ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿ; ಕೆಕೆಆರ್ ಮೆಂಟರ್ ಹುದ್ದೆಗೆ ಗುಡ್ ಬೈ ಹೇಳ್ತಾರಾ ಗಂಭೀರ್.?

ನವದೆಹಲಿ: ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆದ ಬಳಿಕ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರ ಬೇಡಿಕೆಯ ರೇಟಿಂಗ್ ಏರಿದೆ. ಭಾರತದ ಮಾಜಿ ಆಟಗಾರನ ಮಾರ್ಗದರ್ಶನ ಕೆಕೆಆರ್ ಮೂರನೇ ಐಪಿಎಲ್ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿತು ಎಂಬುದು ಸದ್ಯದ ವಿಶ್ಲೇಷಣೆ.
ಗಂಭೀರ್ ಅವರು ಈ ಹಿಂದೆ ತಂಡದ ನಾಯಕರಾಗಿದ್ದಾಗ ಎರಡು ಟ್ರೋಫಿಗಳನ್ನು ಗೆದ್ದಿದ್ದರು. ಇದೀಗ ಮೆಂಟರ್ ಆದ ಬಳಿಕ ದಶಕದ ನಂತರ ತಂಡ ಟ್ರೋಫಿ ಗೆಲ್ಲುವಂತೆ ಮಾಡಿದ್ದಾರೆ. ಈ ಗೆಲುವಿನ ನಂತರ ಅವರು ಟೀಂ ಇಂಡಿಯಾದ ಮುಖ್ಯ ತರಬೇತುದಾರ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.
ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಹೊಸ ಕೋಚ್ಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಹಲವರು ಹೆಸರುಗಳು ಕೇಳಿಬಂದಿವೆ. ಈ ರೇಸ್ನಲ್ಲಿ ಗಂಭೀರ್ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಐಪಿಎಲ್ನ 17ನೇ ಋತುವಿನಲ್ಲಿ ಕೆಕೆಆರ್ ಮೆಂಟರ್ ಆಗಿರುವ ಗಂಭೀರ್, ಭಾರತ ತಂಡದ ಮುಖ್ಯ ಕೋಚ್ ಆಗಲು ಫ್ರಾಂಚೈಸಿ ತೊರೆಯುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಖಾಲಿ ಚೆಕ್ ನೀಡಿ ಸ್ವಾಗತಿಸಿದ್ದ ಶಾರೂಖ್?: ದಶಕದಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ಕೆಕೆಆರ್ ತಂಡಕ್ಕೆ ಗೌತಮ್ ಗಂಭೀರ್ ಅವರನ್ನು ಮಾಲೀಕ ಶಾರೂಖ್ ಖಾನ್ ಖಾಲಿ ಚೆಕ್ ನೀಡಿ ಬರ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ತಂಡದ ಜೊತೆ 10 ವರ್ಷ ಉಳಿಯಬೇಕು ಎಂದು ಖಾನ್ ಮನವಿ ಮಾಡಿದ್ದರು ಎನ್ನಲಾಗಿದೆ. ಇದೀಗ ತಂಡ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದೆ. ಇಂತಿಪ್ಪ ಗಂಭೀರ್ ಅವರು ಭಾರತ ತಂಡಕ್ಕಾಗಿ ಫ್ರಾಂಚೈಸಿ ಬಿಡುವ ನಿರ್ಧಾರ ತಳೆಯಲಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
2012, 2014 ರಲ್ಲಿ ಕೆಕೆಆರ್ ತಂಡದ ನಾಯಕರಾಗಿ ಎರಡು ಐಪಿಎಲ್ ಟ್ರೋಫಿಗಳನ್ನು ಗಂಭೀರ್ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಮೆಂಟರ್ ಆಗಿಯೂ ಸಕ್ಸಸ್ ಕಂಡಿದ್ದಾರೆ. ಕೋಲ್ಕತ್ತಾ ಅಭಿಮಾನಿಗಳು ಕೂಡ ಮಾಜಿ ಕ್ರಿಕೆಟಿಗನ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರು ತಂಡ ತೊರೆಯದಿರಲಿ ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ, ಐಪಿಎಲ್ ಫೈನಲ್ ಪಂದ್ಯದ ನಂತರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಅಧಿಕಾರಿಗಳು ಚೆನ್ನೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ.
Gautam Gambhir and Jay Shah together after the Final match at Chepauk.👀🇮🇳 pic.twitter.com/gQYNG8gemX
— Tanuj Singh (@ImTanujSingh) May 27, 2024