ಚೈತ್ರಾ ಪ್ರಕರಣದಲ್ಲಿ ಇಂದಿರಾ ಕ್ಯಾಂಟೀನ್ ಬಿಲ್ ಹಾಗೂ ಗೋವಿಂದ ಬಾಬುಗೂ ಏನು ಸಂಬಂಧ? ಪ್ರಕರಣಕ್ಕೆ ಇನ್ನಷ್ಟು ಟ್ವಿಸ್ಟ್..!
ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ವಂಚನೆ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್‌ಗೂ (Indira Canteen) ಯಾವುದೇ ಸಂಬಂಧ ಇಲ್ಲ. ನನ್ನ ಉದ್ಯಮದಲ್ಲಿ ಇಂದಿರಾ ಕ್ಯಾಂಟೀನ್ ಕೇವಲ 10%. ಉಳಿದ 90% ಖಾಸಗಿ ಉದ್ಯಮದ್ದಾಗಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಗ್ಗೆ ನಾವು ಎಂದಿಗೂ ಅವರೊಂದಿಗೆ ಮಾತಾಡಿರಲಿಲ್ಲ ಎಂದು ಪ್ರಕರಣದ ದೂರುದಾರರಾದ ಉದ್ಯಮಿ, ಚೆಫ್ ಟ್ಯಾಕ್ ಕಂಪನಿಯ ಮಾಲೀಕ ಗೋವಿಂದ ಬಾಬು ಪೂಜಾರಿ (Govinda Babu Poojari) ಹೇಳಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಗೋವಿಂದ ಬಾಬು ಇಂದಿರಾ ಕ್ಯಾಂಟೀನ್ ವಿಚಾರ ಇಲ್ಲಿ ಬರಲ್ಲ. ಅವರು ಮೋಸ ಮಾಡಿರುವುದು ರಾಜಕೀಯ ವಿಚಾರವಾಗಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಸತ್ಯತೆ ಹೊರಗೆ ಬರಲಿ. ನನ್ನ ಬಳಿಯಿರೋ ಎಲ್ಲಾ ದಾಖಲೆಗಳನ್ನೂ ಕೊಡುತ್ತಿದ್ದೇನೆ. ಅವರು ನಮಗೆ ಪ್ಲ್ಯಾನ್ ಮಾಡಿ ಮೋಸ ಮಾಡಿದ್ದಾರೆ. ಅವರು ಯಾವ ಪಕ್ಷದವರೇ ಆಗಿರಲಿ, ಇನ್ನೊಂದು ಬಾರಿ ಇಂತಹ ಮೋಸ ಆಗಬಾರದು. ಇಂತಹವರಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದಾರೆ.
ಸಿಸಿಬಿಗೆ ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ದೇನೆ. ಸಿಸಿ ಕ್ಯಾಮೆರಾ, ವೀಡಿಯೋ, ಆಡಿಯೋ ಎಲ್ಲಾ ನೀಡಿದ್ದೇನೆ. ನನ್ನ ಬಳಿ ಇನ್ನೂ ಸಾಕ್ಷಿಗಳಿವೆ, ಅವುಗಳನ್ನೂ ನೀಡಲಿದ್ದೇನೆ. ನಾನು ಬೆಳಗ್ಗಿನಿಂದ ರಾತ್ರಿವರೆಗೂ ದುಡಿದ ಹಣ, ಲಾಭವನ್ನೆಲ್ಲಾ ಒಟ್ಟುಗೂಡಿಸಿ 10 ಕೋಟಿ ರೂ. ನೀಡಿದ್ದೇನೆ. ಹೀಗಾಗಿ ಈ ಪ್ರಕರಣದಲ್ಲಿ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಹೇಳಿದರು.
ಬೆಳ್ಳಂಬೆಳಗ್ಗೆ ಸ್ಪೋಟಕ ಹೇಳಿಕೆ ನೀಡಿದ ಚೈತ್ರ ಕುಂದಾಪುರ
ನಿನ್ನೆ ಬಂಧನಕ್ಕೊಳಗಾದ ಅವರನ್ನು ರಾತ್ರಿ ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಸಿಸಿಬಿ ಎಸಿಪಿ ರೀನಾ ಸುವರ್ಣ ಅವರಿಂದ ವಿಚಾರಣೆ ನಡೆಯಲಿದೆ. ಬಳಿಕ ಹಣ ಪಡೆದ ಸ್ಥಳಗಳಲ್ಲಿ ಮಹಜರು ಮಾಡಲಿದ್ದಾರೆ. ಚೈತ್ರಾ ಕುಂದಾಪುರ ಅವರ ಜೊತೆಗೆ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ವಿಚಾರಣೆ ನಡೆಸಲಾಗುತ್ತದೆ.
ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಇನ್ನೂ ದೊಡ್ಡ ದೊಡ್ಡ ಹೆಸರು ಹೊರಗೆ ಬರುತ್ತದೆ-ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಬಂಧನದಲ್ಲಿರುವ ಚೈತ್ರಾ ಕುಂದಾಪುರರನ್ನು ಪೊಲೀಸ್ ಜೀಪಿನಲ್ಲಿ ಇಂದು ಸಿಸಿಬಿ ಪೊಲೀಸರು ಕರೆತಂದಾಗ ಜೀಪಿನಿಂದ ಇಳಿಯುತ್ತಲೇ ಮಾಧ್ಯಮ ಪ್ರತಿನಿಧಿಗಳನ್ನು ಕಂಡಾಗ, ಸ್ಫೋಟಕ ಹೇಳಿಕೆ ನೀಡಿದ್ದಾರೆ.