ಚುನಾವಣೆ ಸಮೀಪದಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ: ಸಂಸದ ಸ್ಥಾನಕ್ಕೂ ರಾಜೀನಾಮೆಗೆ ಮುಂದಾದ ಕರಡಿ ಸಂಗಣ್ಣ
ಕೊಪ್ಪಳ: ಚುನಾವಣೆ ಸಮೀಪದಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ ಏರುತ್ತಿದ್ದು, ಪಕ್ಷದಲ್ಲಿ ಮತ್ತೊಂದು ವಿಕೆಟ್ ಪತನಗೊಂಡಿದೆ. ಕರಡಿ ಸಂಗಣ್ಣ ಸಂಸದ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ್ದಾರೆ. ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ಸಿಗದೇ ತೀವ್ರ ಅಸಮಧಾನಗೊಂಡಿದ್ದರು. ಇದೀಗ ಪಕ್ಷ ತೊರೆದು ಜೆಡಿಎಸ್ (JDS) ಸೇರ್ಪಡೆಗೆ ತಯಾರಿ ನಡೆಸಿದ್ದಾರೆ.
ಸಂಸದರಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದ ಪಕ್ಷದ ವರಿಷ್ಠರ (BJP high command) ಬಳಿ ತಮ್ಮ ಪುತ್ರ ಗವಿಸಿದ್ದಪ್ಪ ಕರಡಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಪುತ್ರನಿಗೂ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಅಸಮಧಾನಗೊಂಡಿರುವ ಸಂಗಣ್ಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆ ಬಳಿಕ ಮುಂದಿನ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಲಿದ್ದಾರೆ.
ಸಭೆಯ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಸಂಗಣ್ಣ, ಸೋಮವಾರ ಲೋಕಸಭಾ ಸ್ಪೀಕರ್‍ಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಏ.19 ರಂದು ಜೆಡಿಎಸ್‍ನಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.