ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು
ಚಂಡೀಗಢ: ಅಕ್ರಮ ಗರ್ಭಪಾತಕ್ಕೆ (Abortion) ಯತ್ನಿಸಿದ ಹಿನ್ನೆಲೆಯಲ್ಲಿ 19 ವರ್ಷದ ಯವತಿಯು (Woman) ಸಾವನ್ನಪ್ಪಿದ ಘಟನೆ ಹರಿಯಾಣದ (Haryana) ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.
ಹಿಸಾರ್ ಜಿಲ್ಲೆಯ ಆಗ್ರೋಹಾದಲ್ಲಿ ಈ ಘಟನೆ ನಡೆದಿದೆ. ಯುವತಿ ಅವಿವಾಹಿತೆಯಾಗಿದ್ದು, 4 ತಿಂಗಳ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಕರು ಆಕೆಯನ್ನು ಗರ್ಭಪಾತಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆಕೆಗೆ ಗರ್ಭಪಾತಕ್ಕೆ ಪ್ರಯತ್ನಿಸಲಾಗಿದೆ. ಆದರೆ ಇದರಿಂದಾಗಿ ಯುವತಿಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಅದಾದ ಬಳಿಕ ಆಕೆಯ ಸ್ಥಿತಿ ಹದಗೆಟ್ಟಿರುವುದನ್ನು ಕಂಡು, ಪೋಷಕರು ಆಕೆಯನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಅಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯ ಕರುಳುಗಳು ಹೊರಬಂದಿದ್ದು, ಗರ್ಭಾಶಯದಲ್ಲಿ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಮೂತ್ರಪಿಂಡಗಳು ಸಹ ವಿಫಲವಾಗಿತ್ತು.
ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಯುವತಿ ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.