- ರಾಷ್ಟ್ರೀಯ
- 12:11 ಅಪರಾಹ್ನ
- ಮೇ 26, 2023
ಗಂಡ ಅಮೆರಿಕದಲ್ಲಿ ಸಾವನ್ನಪ್ಪಿದ ನೋವನ್ನು ತಾಳಲಾರದೆ ಹೆಂಡತಿ ಆತ್ಮಹತ್ಯೆ!

ಹೈದರಾಬಾದ್: ಗಂಡನ ಸಾವಿನ ನೋವಿನಿಂದ ಹೊರಬರಲಾಗದೇ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ನ ಅಂಬರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಸಾಹಿತಿ (29) ಮೃತ ಮಹಿಳೆ. ಈಕೆ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿ. ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಮನೋಜ್ (31) ಎಂಬುವರನ್ನು ಮದುವೆ ಆಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್ನಲ್ಲಿ ನೆಲೆಸಿದ್ದರು.
ಈ ತಿಂಗಳ 2ರಂದು ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಅಮೆರಿಕದಿಂದ ಮರಳಿದ್ದಳು. ಆದರೆ, ಮನೋಜ್ ಮಾತ್ರ ಅಮೆರಿಕದಲ್ಲೇ ಉಳಿದಿದ್ದ. ಇದೇ ತಿಂಗಳು 20ರಂದು ಮನೋಜ್ ಹೃದಯಾಘಾತದಿಂದ ಮೃತಪಟ್ಟರು. ಮೇ 23ರಂದು ಆತನ ಮೃತದೇಹವನ್ನು ಅಮೆರಿಕದಿಂದ ವನಸ್ಥಳಿಪುರಂಗೆ ತರಿಸಿಕೊಳ್ಳಲಾಯಿತು. ಮೇ 24ರಂದು ಗಂಡನ ಅಂತ್ಯಕ್ರಿಯೆ ಮುಗಿಸಿ, ಅದೇ ದಿನ ರಾತ್ರಿ ತನ್ನ ಪಾಲಕರ ಮನೆಗೆ ಸಾಹಿತಿ ಹಿಂತಿರುಗಿದ್ದಳು.
ಸಾಹಿತಿಯು ಸಹೋದರಿ ಸಂಜನಾ ಜತೆ ಕೋಣೆಯಲ್ಲಿ ಮಲಗಿದ್ದಳು. ಸಂಜನಾ ಗುರುವಾರ ಬೆಳಗ್ಗೆ ಎದ್ದು ವಾಶ್ರೂಮ್ಗೆ ತೆರಳಿದಳು. ಇದೇ ಸಮಯಕ್ಕೆ ಎದ್ದ ಸಾಹಿತಿ ರೂಮಿನ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿ, ಫ್ಯಾನಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಈ ವಿಚಾರ ಗೊತ್ತಾದ ಬಳಿಕ ರೂಮಿನ ಬಾಗಿಲು ಒಡೆದು ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸಾಹಿತಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.