- ಬೆಂಗಳೂರು
- 10:17 ಫೂರ್ವಾಹ್ನ
- ಜನವರಿ 28, 2023
ಕರ್ನಾಟಕದ ಮಕ್ಕಳಿಗೂ ಮೋದಿ ಪರೀಕ್ಷಾ ಪಾಠ: ಕೇಂದ್ರ ಸಚಿವ ಆರ್‌ಸಿ ಭಾಗಿ

ಬೆಂಗಳೂರು(ಜ.28): ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೆಹಲಿಯಲ್ಲಿ ನಡೆಸಿದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಅವಕಾಶ ಕಲ್ಪಿಸಲಾಗಿತ್ತು.
ಬೆಂಗಳೂರಿನ ಅಗರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳು ಬೃಹತ್ ಎಲ್‌ಇಡಿ ಸ್ಕ್ರೀನ್ ಮೂಲಕ ‘ಪರೀಕ್ಷಾ ಪೇ ಚರ್ಚಾ’ ನೇರ ಪ್ರಸಾರ ವೀಕ್ಷಣೆ ಮಾಡಿದರು. ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾರ್ಯಕ್ರಮ ಮುಕ್ತಾಯಗೊಳ್ಳುವವರೆಗೂ ವಿದ್ಯಾರ್ಥಿಗಳೊಂದಿಗೆ ಕೂತು ವೀಕ್ಷಿಸಿದರು.
ನೇರ ಪ್ರಸಾರ ಮುಕ್ತಾಯಗೊಂಡ ಬಳಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಅವರ ಪ್ರಶ್ನೆಗಳನ್ನು ಆಲಿಸಿ ಉತ್ತರಿಸಿದ ಸಚಿವರು, ಪರೀಕ್ಷೆಯ ಬಗ್ಗೆ ಯಾವುದೇ ಭಯ, ಆತಂಕ ಬೇಡ. ಸವಾಲಾಗಿ ಸ್ವೀಕರಿಸಿ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಪರೀಕ್ಷೆಯ ತಯಾರಿ, ಎದುರಿಸುವ ಬಗೆ, ಒತ್ತಡ ನಿಭಾಯಿಸುವುದು, ಫಲಿತಾಂಶ ವಿಷಯದಲ್ಲಿ ಶಾಲೆಗಳು, ಶಿಕ್ಷಕರು, ಪೋಷಕರ ನಿರೀಕ್ಷೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರಿಸುವುದನ್ನು ವಿದ್ಯಾರ್ಥಿಗಳು ಗಮನವಿಟ್ಟು ಆಲಿಸಿದರು. ಕೆಲವು ಪ್ರಶ್ನೆಗಳಿಗೆ ‘ಜಾಣ ಕಾಗೆಯ ಕಥೆ’, ‘ಕೆಟ್ಟಕಾರನ್ನು ಮೆಕಾನಿಕ್ ರಿಪೇರಿ ಮಾಡಿದ’ ಕಥೆಗಳನ್ನು ಹೇಳಿ ಮೋದಿ ಅವರು ಉತ್ತರ, ಸಲಹೆಗಳನ್ನು ನೀಡಿದಾಗ ಚಪ್ಪಾಳೆ ತಟ್ಟಿಮಕ್ಕಳು ಖುಷಿಪಟ್ಟರು.
ಬಳಿಕ ತಮ್ಮಲ್ಲಿ ಉದ್ಭವಿಸಿದ ಇನ್ನಷ್ಟು ಪ್ರಶ್ನೆಗಳನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಮುಂದಿಟ್ಟು ಉತ್ತರ ಪಡೆದುಕೊಂಡರು. ಸಚಿವರು ಮೋದಿ ಅವರು ನೀಡಿದ ಸಲಹೆಗಳನ್ನು ಪುನರುಚ್ಚರಿಸುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು. ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಭವಿಷ್ಯವಾದ ಯುವಶಕ್ತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಯುವಜನರಿಗಾಗಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ಭಾರತವನ್ನು ಜಾಗತಿಕವಾಗಿ ಬಲಿಷ್ಠ ರಾಷ್ಟ್ರವಾಗಿಸಲು ಶ್ರಮಿಸಬೇಕು ಎಂದು ತಿಳಿಸಿದರು. ಈ ವೇಳೆ, ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಮಾಜಿ ಕಾರ್ಪೊರೇಟರ್‌ಗಳು, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಉಪಸ್ಥಿತರಿದ್ದರು.