- ಬೆಂಗಳೂರು
- 9:50 ಫೂರ್ವಾಹ್ನ
- ಜನವರಿ 13, 2023
ಕನ್ನಡ ಮಾತಾಡಿದ ಯುವತಿಗೆ ಕೇರಳ ಯುವತಿ ಹಲ್ಲೆ- ಒಂದೇ ಪಿಜಿಯಲ್ಲಿದ್ರೂ ಭಾಷಾ ತಾರತಮ್ಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನ್ಯಭಾಷಿಕರ ಉಪಟಳ ಹೆಚ್ಚಾಗಿದೆ. ನನಗೆ ಅರ್ಥವಾಗದ ಕನ್ನಡ ಭಾಷೆ, ನನ್ಮುಂದೆ ಮಾತನಾಡಬೇಡ ಅಂತ, ತಲೆಗೆ ರಕ್ತ ಹೆಪ್ಪುಗಟ್ಟುವಂತೆ ಕನ್ನಡದ ಯುವತಿಗೆ, ಕೇರಳ (Kerala) ದ ಯುವತಿ ಹಲ್ಲೆ ಮಾಡಿದ್ದಾರೆ.
ಹೌದು. ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿ ಸೃಷ್ಟಿ ಬಿಟಿಎಂ ಲೇಔಟ್‍ನ ಪಿಜಿಯಲ್ಲಿದ್ರು. ಇವರಿಗೆ ಕೇರಳ ಮೂಲದ ಅಸ್ಸೇಲಾ ಎಂಬ ಯುವತಿ ರೂಂಮೇಟ್ ಆಗಿದ್ರು. ಮೊನ್ನೆ ಸೃಷ್ಟಿ ಫೋನಲ್ಲಿ ಕನ್ನಡ (Kannada Language) ಮಾತನಾಡ್ತಿರುವಾಗ, ನನಗೆ ಕನ್ನಡ ಅರ್ಥ ಆಗಲ್ಲ. ಇಂಗ್ಲೀಷ್‍ನಲ್ಲೇ ಮಾತನಾಡು ಅಂತ ಕನ್ನಡ ಭಾಷೆಗೆ ಅವಮಾನಿಸಿ, ಧಮ್ಕಿ ಹಾಕಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಸೃಷ್ಟಿ ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ತಲೆಯಲ್ಲಿ ರಕ್ತಹೆಪ್ಪುಗಟ್ಟಿದ್ದು, ಸಿಟಿ ಸ್ಕ್ಯಾನಿಂಗ್‍ಗೆ ನಿಮಾನ್ಸ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗಿದೆ.
2 ವರ್ಷದಿಂದ ಒಟ್ಟಿಗೆ ವಾಸವಿರುವ ಇವರಿಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಮನಸ್ತಾಪ, ಗಲಾಟೆಗಳು ಭಾಷೆಯ ವಿಚಾರವಾಗಿ ನಡೆದಿತ್ತಂತೆ. ಆದರೆ ಮೊನ್ನೆ ಕನ್ನಡ ಭಾಷೆಯನ್ನ ತೀರಾ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಘಟನೆ ಬಳಿಕ ಪಿಜಿ ಮಾಲೀಕರು ಕೇರಳ ಮೂಲದ ಅಸ್ಸೇಲಾ ಎಂಬ ಯುವತಿಯನ್ನ ಹೊರ ಕಳಿಸಿದ್ದಾರೆ. ಇನ್ನೂ ಸೃಷ್ಟಿ ಅಸ್ಸೇಲಾ ವಿರುದ್ದ ಮೈಕೋಲೇಔಟ್ ಪೊಲೀಸ್ ಠಾಣೆ (Mico Layout Police Station) ಯಲ್ಲಿ ದೂರು ದಾಖಲಿಸಿದ್ದಾರೆ.
ವಿವಿಧ ಕನ್ನಡ ಪರ ಸಂಘಟನೆಗಳು, ಕರ್ನಾಟಕದ ಯುವತಿ ಸೃಷ್ಟಿ ಬೆಂಬಲಕ್ಕೆ ನಿಂತಿದ್ದು, ಹಲ್ಲೆ ಮಾಡಿದ ಯುವತಿಯ ಮೇಲೆ ಕ್ರಮಕ್ಕೆ ಆಗ್ರಹಿಸಿವೆ. ಅದೇನೆ ಆಗ್ಲಿ, ಕನ್ನಡದ ನೆಲದಲ್ಲಿ, ಕನ್ನಡ ಭಾಷೆಗೆ ಅವಮಾನ ಮಾಡಿ, ಕರ್ನಾಟಕದ ಯುವತಿಯ ಮೇಲೆನೇ ಹಲ್ಲೆ ಮಾಡಿದ್ದಕ್ಕೆ ಕನ್ನಡ ಸಂಘಟನೆಗಳು ನಿಗಿನಿಗಿ ಕೆಂಡ ಕಾರುತ್ತಿವೆ.