ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಐತಿಹಾಸಿಕ ಫೈನಲ್ಗೆ ಸಾತ್ವಿಕ್-ಚಿರಾಗ್ ಶೆಟ್ಟಿ!
ದುಬೈ(ಏ.30): ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆ ಬರೆದಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದ ನಡುವೆ ತಮ್ಮ ಎದುರಾಳಿಗಳು ಗಾಯಗೊಂಡು ನಿವೃತ್ತಿ ಪಡೆದ ಕಾರಣ, ಭಾರತೀಯ ಜೋಡಿ ಫೈನಲ್ ಪ್ರವೇಶಿಸಿತು.
ಚೈನೀಸ್ ತೈಪೆಯ ಲೀ ಯಾಂಗ್ ಹಾಗೂ ವಾಂಗ್ ಚೀ-ಲಿನ್ ವಿರುದ್ಧದ ಪಂದ್ಯದ ಮೊದಲ ಗೇಮ್ನಲ್ಲಿ 21-18ರ ಗೆಲುವು ಸಾಧಿಸಿದ್ದ ಸಾತ್ವಿಕ್-ಚಿರಾಗ್, 2ನೇ ಗೇಮ್ನಲ್ಲಿ 13-14ರಿಂದ ಹಿಂದಿದ್ದರು. ಈ ವೇಳೆ ತೈಪೆ ಜೋಡಿ ಪಂದ್ಯದಿಂದ ಹಿಂದೆ ಸರಿಯಿತು. ಭಾರತೀಯ ಜೋಡಿಗೆ ಫೈನಲ್ನಲ್ಲಿ ಮಲೇಷ್ಯಾದ ಒಂಗ್ ಸಿನ್ ಹಾಗೂ ಟಿಯೊ ಯೀ ಎದುರಾಗಲಿದ್ದಾರೆ.
ಇನ್ನು ಸಿಂಗಲ್ಸ್ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್.ಪ್ರಣಯ್ ಜಪಾನ್ನ ಕಂಟಾ ತ್ಸುನೆಯಮಾ ವಿರುದ್ಧ ಗಾಯಗೊಂಡು ಟೂರ್ನಿಯಿಂದ ಹೊರನಡೆದರೆ, ಮಹಿಳಾ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು ಕೊರಿಯಾದ ಆನ್ ಸೆ ಯಂಗ್ ವಿರುದ್ಧ 21-18, 5-21, 9-21 ಗೇಮ್ಗಳಲ್ಲಿ ಪರಾಭವಗೊಂಡರು. ಮಿಶ್ರ ಡಬಲ್ಸ್ ಕ್ವಾರ್ಟರ್ನಲ್ಲಿ ರೋಹನ್ ಕಪೂರ್-ಸಿಕ್ಕಿ ರೆಡ್ಡಿ ಜೋಡಿಯೂ ಸೋತು ಹೊರ ಬಿದ್ದಿದೆ.