ಊಟದ ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಅಡುಗೆ ಸಿಬ್ಬಂದಿಯನ್ನೇ ಹೊಡೆದು ಕೊಂದ್ರು
ನವದೆಹಲಿ: ಮದುವೆಯೊಂದರಲ್ಲಿ (Wedding) ಊಟದ ತಟ್ಟೆಗಳನ್ನು (Food Plate) ನೀಡುವುದರ ಕುರಿತು ನಡೆದ ವಾಗ್ವಾದದಲ್ಲಿ ಮ್ಯೂಸಿಕ್ ಬ್ಯಾಂಡ್ನ (Music Band) ಸದಸ್ಯರು ಅಡುಗೆ ಸಿಬ್ಬಂದಿಯನ್ನು ಹೊಡೆದು ಹತ್ಯೆಗೈದ ಘಟನೆ ದೆಹಲಿಯಲ್ಲಿ (New Delhi) ನಡೆದಿದೆ.
ಅಡುಗೆ ಸಿಬ್ಬಂದಿ ಸಂದೀಪ್ ಮೃತ ವ್ಯಕ್ತಿ. ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಈ ಘಟನೆ ನಡೆದಿದೆ. ಡಿಜೆ ಸೇರಿದಂತೆ ಮ್ಯೂಸಿಕ್ ಬ್ಯಾಂಡ್ನ ಸದಸ್ಯರು ಸಂದೀಪ್ ಸಿಂಗ್ ಬಳಿ ಊಟಕ್ಕೆ ಪ್ಲೇಟ್‍ಗಳನ್ನು ಕೇಳಿದ್ದರು.
ಈ ವೇಳೆ ಸಂದೀಪ್ ಸಿಂಗ್, ಸ್ವಚ್ಛಗೊಳಿಸಲಾಗುತ್ತಿದೆ. ಹಾಗಾಗಿ ಸ್ವಲ್ಪ ಸಮಯದ ನಂತರ ಪ್ಲೇಟ್‍ಗಳನ್ನು ನೀಡುತ್ತೇವೆ ಎಂದು ಆ ವಾದಕರಿಗೆ ತಿಳಿಸಿದ್ದಾನೆ.
ಪ್ಲೇಟ್ ನೀಡುವುದು ತಡವಾಗಿದ್ದರಿಂದ ಕೋಪಗೊಂಡ ಬ್ಯಾಂಡ್ ಸದಸ್ಯರು ಸಂದೀಪ್‍ನನ್ನು ಪ್ಲಾಸ್ಟಿಕ್ ಕ್ರೇಟ್‍ನಿಂದ ಥಳಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಸಂದೀಪನನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ವಾಗ್ವಾದದಲ್ಲಿ ನಾಲ್ವರು ಭಾಗಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.