ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!
ಉಪ್ಪಿನಂಗಡಿ: ಇಲ್ಲಿನ ನೆಟ್ಟಿಬೈಲು ನಿವಾಸಿ ವಿನಾಯಕ ಭಟ್ (32) ಅವರು ತೀವ್ರ ಜ್ವರ ಬಾಧೆಯಿಂದ ಮೃತಪಟ್ಟಿದ್ದಾರೆ.
ಅವರು ಸುಮಾರು ಹತ್ತು ವರ್ಷಗಳಿಂದ ಮೂಡುಬಿದಿರೆಯ ಶ್ರೀ ವೆಂಕಟರಮಣ ದೇಗುಲದಲ್ಲಿ ಸಹಾಯಕ ಅರ್ಚಕರಾಗಿದ್ದು, ಸೋಮವಾರ ಅವರು ಉಪ್ಪಿನಂಗಡಿಯ ಮನೆಗೆ ಬಂದಿದ್ದು, ಅಲ್ಲಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಮಂಗಳವಾರ ರಾತ್ರಿ ವೇಳೆಗೆ ಜ್ವರ ಉಲ್ಬಣಗೊಂಡಿತ್ತು. ತತ್ಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ
ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕನನ್ನು ಮೇಲಕ್ಕೆತ್ತಲು ಹಾರಿದ ಯುವಕನೂ ಮೇಲೆ ಬಾರಲಾಗದ ಕಾರಣ ಬಳಿಕ ಅಗ್ನಿಶಾಮಕ ದಳದ ಸಿಬಂದಿಯ ಸಹಕಾರದಲ್ಲಿ ಸುರಕ್ಷಿತವಾಗಿ ಮೇಲೆ ಬಂದ ಘಟನೆ ನಡೆದಿದೆ.
ಕಿನ್ನಿಮೂಲ್ಕಿಯ ಕಾರ್ಮಿಕರ ಕಾಲನಿಯ 16 ವರ್ಷದ ಬಾಲಕ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಇದನ್ನು ನೋಡಿದ 34 ವರ್ಷದ ಯುವಕನೂ ರಕ್ಷಿಸಲೆಂದು ಹಾರಿದ್ದಾನೆ. ಸುಮಾರು 8 ಅಡಿ ಸುತ್ತಳತೆ, 35 ಅಡಿ ಆಳದ ಬಾವಿ ಇದಾಗಿದ್ದು, ಸುಮಾರು 5 ಅಡಿಗಳಷ್ಟು ನೀರಿತ್ತು. ಆದರೆ ಮೇಲೆ ಬರಲು ಸಾಧ್ಯವಾಗಲಿಲ್ಲ. ಇವರಿಬ್ಬರನ್ನೂ ದೂರದಿಂದ ಗಮನಿಸಿದ್ದ ವ್ಯಕ್ತಿಯೊಬ್ಬರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸತೀಶ್, ಆಲ್ವಿನ್, ಪ್ರಶಾಂತ್, ಮಂಜುನಾಥ್, ಸುಭಾಷ್, ರಾಕೇಶ್ ಸಹಕರಿಸಿದರು.
ಮರ ಕಡಿಯುವಾಗ ಕೊಂಬೆ ಮಧ್ಯೆ ಸಿಲುಕಿ ವ್ಯಕ್ತಿ ಸಾವು
ಸುಳ್ಯ: ಮರ ಕಡಿಯುವಾಗ ಮರದ ಕೊಂಬೆಯ ಮಧ್ಯೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಸುಳ್ಯದ ಕುರುಂಜಿ ಗುಡ್ಡೆಯಲ್ಲಿ ಮಂಗಳವಾರ ನಡೆದಿದೆ. ಕೇರ್ಪಳದ ಚಿನ್ನಪ್ಪ ನಾಯ್ಕ ಮೃತರು.
ಕುರುಂಜಿ ಗುಡ್ಡೆಯಲ್ಲಿ ಮರ ಕಡಿಯುತ್ತಿದ್ದಾಗ ಮರದ ಬುಡ ಹಿಂದಕ್ಕೆ ಬಂದಿದೆ. ಈ ವೇಳೆ ಸಮೀಪದಲ್ಲಿದ್ದ ಚಿನ್ನಪ್ಪ ಅವರು ಮರದ ಬುಡ ಮತ್ತು ಇನ್ನೊಂದು ಮರದ ನಡುವೆ ಸಿಲುಕಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಇನ್ನು ಸುಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.