ಇಂದು ರಿಮೋಟ್ ವೋಟಿಂಗ್ ಮೆಷಿನ್ ಬಗ್ಗೆ ಚರ್ಚಿಸಲು ಸರ್ವ ಪಕ್ಷಗಳ ಸಭೆ
ಹೊಸದಿಲ್ಲಿ: ಭಾರತದ ಚುನಾವಣಾ ಆಯೋಗ ದೇಶೀಯ ವಲಸೆ ಮತದಾರರಿಗಾಗಿ ದೂರ ನಿಯಂತ್ರಿತ ವಿದ್ಯುನ್ಮಾನ ಮತಯಂತ್ರ(ಆರ್‌ವಿಎಂ)ದ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಬಹುಕ್ಷೇತ್ರದ ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ ಇದಾಗಿದ್ದು, ಇದರ ಮೂಲಕ ಒಂದೇ ದೂರ ನಿಯಂತ್ರಿತ ಮತಗಟ್ಟೆಯಿಂದ 72 ಕ್ಷೇತ್ರಗಳ ಮತದಾನವನ್ನು ನಿರ್ವಹಿಸಬಹುದು. ಈ ವ್ಯವಸ್ಥೆಯಿಂದ ವಲಸೆ ಮತದಾರರು ಎಲ್ಲೇ ಇದ್ದರೂ ಮತ ಚಲಾಯಿಸಲು ಸಾಧ್ಯವಾಗಲಿದೆ.
ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ (ರಿಮೋಟ್ ವೋಟಿಂಗ್ ಮೆಷಿನ್-ಆರ್‌ವಿಎಂ) ದ ಪ್ರಾತ್ಯಕ್ಷಿಕೆ ನೀಡಲು ಹಾಗೂ ಅದರ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗ ಜನವರಿ 16ರಂದು ಎಲ್ಲ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದೆ.
ದೇಶೀಯ ವಲಸಿಗರು ಮತ ಚಲಾಯಿಸುವುದನ್ನು ಉತ್ತೇಜಿಸಲು ಮೂಲ ಮಾದರಿಯ ಬಹುಕ್ಷೇತ್ರದ ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ (ಆರ್‌ವಿಎಂ) ವನ್ನು ಜಾರಿಗೆ ತರುವ ಬಗ್ಗೆ ಚುನಾವಣಾ ಆಯೋಗ ಡಿಸೆಂಬರ್ 29ರಂದು ಘೋಷಿಸಿತ್ತು.
ದೇಶೀಯ ವಲಸೆಯಿಂದಾಗಿ ಮತ ಚಲಾಯಿಸಲು ಸಾಧ್ಯವಾಗದೇ ಇರುವುದು ಕಡಿಮೆ ಮತ ಚಲಾವಣೆಯಾಗುವ ಹಿಂದಿನ ಪ್ರಮುಖ ಕಾರಣ ಎಂದು ಚುನಾವಣಾ ಆಯೋಗ ಹೇಳಿದೆ. ಇನ್ನು ಮುಂದೆ ದೇಶೀಯ ವಲಸೆ ಮತದಾರರು ತಮ್ಮ ಮತವನ್ನು ಚಲಾಯಿಸಲು ತಮ್ಮ ಊರಿಗೆ ತೆರಳುವ ಅಗತ್ಯ ಇರುವುದಿಲ್ಲ. ತಾವು ಇದ್ದಲ್ಲೇ ಮತ ಚಲಾಯಿಸಬಹುದು.
ಬಹುಕ್ಷೇತ್ರದ ಮೂಲ ಮಾದರಿಯ ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆಗೆ ಚುನಾವಣಾ ಆಯೋಗ ಮಾನ್ಯತೆ ಪಡೆದ ಎಲ್ಲ 8 ರಾಷ್ಟ್ರೀಯ ಹಾಗೂ 57 ಪ್ರಾದೇಶಿಕ ರಾಜಕೀಯ ಪಕ್ಷಗಳ ಸಭೆಯನ್ನು ಜನವರಿ 16ರಂದು ಕರೆದಿದೆ. ಈ ಪ್ರಾತ್ಯಕ್ಷಿಕೆ ಸಂದರ್ಭ ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರು ಕೂಡ ಉಪಸ್ಥಿತರಿರಲಿದ್ದಾರೆ.
ದೇಶೀಯ ವಲಸಿಗರಿಗೆ ಕಾನೂನಿನಲ್ಲಿ ಅಗತ್ಯವಾಗಿರುವ ಬದಲಾವಣೆ, ಆಡಳಿತಾತ್ಮಕ ಕಾರ್ಯವಿಧಾನ, ಮತದಾನದ ವಿಧಾನ/ಆರ್‌ವಿಎಂ/ತಂತ್ರಜ್ಞಾನದಲ್ಲಿ ಬದಲಾವಣೆ ಹಾಗೂ ಇತರ ಏನಾದರೂ ಸೇರಿದಂತೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಜನವರಿ 31ರ ಒಳಗೆ ಅಭಿಪ್ರಾಯ ತಿಳಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.