ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?
ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ, ಇಂದು (ಮೇ 15) ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಸುದ್ದಿ ಇತ್ತು. ಇದಕ್ಕೆ ಪೂರಕವೆಂಬಂತೆ ಪಜ್ವಲ್ ಫ್ಲೈಟ್ ಟಿಕೆಟ್ ಸಹ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ಗಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಆದ್ರೆ, ಪ್ರಜ್ವಲ್ ರೇವಣ್ಣ, ಕೊನೆ ಕ್ಷಣದಲ್ಲಿ ಮತ್ತೊಮ್ಮೆ ಜಮರ್ನಿಯಿಂದ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದಾರೆ. ಈ ಮೂಲಕ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ
ಈಗಿನ ಮಾಹಿತಿ ಪ್ರಕಾರ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಸದ್ಯ ಎಸ್‌ಐಟಿ ತಂಡದವರು ಬೇರೆ ದೇಶಕ್ಕೆ ತೆರಳಿ ಪ್ರಜ್ವಲ್ ಅವರನ್ನು ಕರೆತರಲು ಸಾಧ್ಯವಿಲ್ಲ. ಇನ್ನು ಪ್ರಜ್ವಲ್ ಇಲ್ಲಿಂದ ಜರ್ಮನಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿ ಹೋಗಿದ್ದಾರಾದರೂ ಅವರು ಜರ್ಮನಿಯಲ್ಲಿಯೇ ಇದ್ದಾರಾ? ಅಥವಾ ಅಲ್ಲಿಂದ ಬೇರೆ ದೇಶಕ್ಕೇನಾದರೂ ಹೋಗಿದ್ದಾರಾ ಎಂಬುದೂ ಖಾತ್ರಿಯಾಗಿಲ್ಲ. ಆದರೆ, ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಂತೆ ಫ್ಲೈಟ್ ಟಿಕೆಟ್ ಅನ್ನು ಮಾತ್ರ ಬುಕ್ ಮಾಡುತ್ತಾ ಕುಳಿತಿದ್ದಾರೆ. ಕೊನೇ ಕ್ಷಣದಲ್ಲಿ ಫ್ಲೈಟ್ ಹತ್ತದೆ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಅದು ಬಿಟ್ಟರೆ ಇತ್ತ ಸುಳಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.
ಹೀಗಾಗಿ ಮೊದಲು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕಲೆ ಹಾಕಬೇಕು. ಇಲ್ಲದೆ ಹೋದರೆ ಈಗಾಗಲೇ ಜಾರಿ ಮಾಡಲಾಗಿರುವ ಬ್ಲೂ ಕಾರ್ನರ್ ನೋಟಿಸ್‌ನಿಂದಾಗಿ ಯಾವ ದೇಶದಿಂದಾದರೂ ಮಾಹಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಹೀಗಾಗಿ ಇಂಟರ್ ಪೋಲ್ ಅಧಿಕಾರಿಗಳಿಂದ ಮಾಹಿತಿ ಬರುವವರೆಗೂ ಕಾಯಲೇಬೇಕು.
ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿಯೇ ಅಥವಾ ಇನ್ಯಾವುದೋ ದೇಶದಲ್ಲಿ ಅಡಗಿದ್ದಾರೆ ಎಂಬುದು ಗೊತ್ತಾದರೆ ಎಸ್‌ಐಟಿ ಹೋಗಿ ಅರೆಸ್ಟ್ ಮಾಡಬಹುದಾ ಎಂದು ಕೇಳಿದರೆ, ಅದು ಸಾಧ್ಯವಿಲ್ಲ ಎಂಬ ಉತ್ತರ ಸಿಗಲಿದೆ. ಹಾಗಾಗಿ ಅವರು ಯಾವ ದೇಶದಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕರೆ ಇಂಟರ್ ಪೋಲ್ ಮುಖಾಂತರ ಹಸ್ತಾಂತರ ಮಾಡಿಕೊಳ್ಳಬಹುದು. ಅದು ಕೂಡ ಆ ದೇಶ ಹಾಗೂ ನಮ್ಮ ದೇಶದ ನಡುವೆ ಹಸ್ತಾಂತರ ಒಪ್ಪಂದ (Extradition Treaty) ಇರಬೇಕು. ಆಗ ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿ ಹಸ್ತಾಂತರ ಮಾಡಿಕೊಳ್ಳಬಹುದು. ಅದೂ ಆಗದೇ ಹೋದರೆ, ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಸುಮ್ಮನೆ ಕೂರಬಹುದೇ ಹೊರತು ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ಆಗ ಪ್ರಜ್ವಲ್ ತಾನಾಗಿಯೇ ಬರುವವರೆಗೂ ಕಾಯಲೇಬೇಕು.