ಅನಗತ್ಯ ದಾಖಲೆ ಮುರಿದ ರೋಹಿತ್ ಶರ್ಮಾ!
ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ರನ್ಗಳ ಸುರಿಮಳೆಯೇ ಸುರಿದಿದೆ. ಆದರೆ ಕಳಪೆ ಫಾರ್ಮ್ನಲ್ಲಿ ಹಲವಾರು ಬ್ಯಾಟ್ಸ್ಮನ್ಗಳು ರನ್ ಬರವನ್ನು ಎದುರಿಸುತ್ತಿದ್ದು, ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಇದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿಯೂ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಟಿ20 ಹಾಗೂ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಶರ್ಮಾರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಸಕ್ತ ಐಪಿಎಲ್ನಲ್ಲಿ ರನ್ಗಳು ಹರಿದು ಬಂದಿಲ್ಲ.
ಮುಂಬೈ ತಂಡದ ಆರಂಭಿಕನಾಗಿ ಬ್ಯಾಟ್ಸ್ಮನ್ ಆಗಿರುವ ರೋಹಿತ್, ಚೆನ್ನೈ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದರು. ಆದರೆ ಧೋನಿಯ ಚಾಣಾಕ್ಷತನದ ಮುಂದೆ ರೋಹಿತ್ ಆಟ ನಡೆಯಲಿಲ್ಲ. ದೀಪಕ್ ಚಾಹರ್ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾದ ರೋಹಿತ್, ಜಡೇಜಾಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಹಿಂದಿರುಗಿದರು. ಖಾತೆ ತೆರೆಯುವಲ್ಲಿ ವಿಫಲರಾದ ರೋಹಿತ್ ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 16ನೇ ಬಾರಿ ಶೂನ್ಯಕ್ಕೆ ಔಟಾದ ಕೆಟ್ಟ ದಾಖಲೆಗೆ ಪಾತ್ರರಾದರು.
15ನೇ ಬಾರಿ ಶೂನ್ಯಕ್ಕೆ ಔಟಾದ ದಿನೇಶ್ ಕಾರ್ತಿಕ್, ಮನದೀಪ್ ಸಿಂಗ್ ಹಾಗೂ ಸುನೀಲ್ ನರೇನ್ ಹೆಚ್ಚು ಡಕೌಟ್ ಆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಅಂಬಟಿ ರಾಯಡು 14 ಬಾರಿ ಔಟಾಗಿ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಕಳಪೆ ಫಾರ್ಮ್ನಲ್ಲಿರುವುದು ಮುಂಬೈ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಒಂದು ಶತಕ ಹಾಗೂ 41 ಅರ್ಧಶತಕಗಳನ್ನು ಹೊಂದಿರುವ ರೋಹಿತ್ ಐಪಿಎಲ್ನಲ್ಲಿ ಈವರೆಗೆ ಒಟ್ಟು 6063 ರನ್ಗಳನ್ನು ಬಾರಿಸಿದ್ದಾರೆ. ಈವರೆಗೆ ರೋಹಿತ್ ನಾಯಕತ್ವದಲ್ಲಿ ಮುಂಬೈ 5 ಕಪ್ಗಳನ್ನು ಗೆದ್ದಿದ್ದು, ಐಪಿಎಲ್ನಲ್ಲಿ ತಮ್ಮದೇ ಆದ ಹಲವು ದಾಖಲೆಯನ್ನು ಹೊಂದಿದ್ದಾರೆ.