ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕ್ ಗೆಳತಿಯನ್ನು ಮದ್ವೆಯಾಗಿದ್ದ ಬೆಂಗ್ಳೂರು ಸೆಕ್ಯೂರಿಟಿ ಗಾರ್ಡ್; ಯುವತಿ ಬಂಧನ
ಬೆಂಗಳೂರು: ಪಾಕಿಸ್ತಾನಿ ಗೆಳತಿಯನ್ನು ಅಕ್ರಮವಾಗಿ ಇಟ್ಟುಕೊಂಡು ಸಂಸಾರ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಉತ್ತರ ಪ್ರದೇಶ ಮುಲಾಯಂ ಸಿಂಗ್ ಯಾದವ್(25) ಬಂಧಿತ ಆರೋಪಿ. ಮುಲಾಯಂ ಸಿಂಗ್ ಜೊತೆ ಇದ್ದ ಪಾಕಿಸ್ತಾನದ (Pakistan) ಇಕ್ರಾ ಜೀವನಿಯನ್ನು(19) ಬಂಧಿಸಿ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಮುಲಾಯಂ ಸಿಂಗ್ ಯಾದವ್ ಕಳೆದ ಏಳು ವರ್ಷಗಳಿಂದ ಬೆಂಗಳೂರಿನ (Bengaluru) ಬೇರೆ ಬೇರೆ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಆನ್‌ಲೈನ್‌ನಲ್ಲಿ ಲೂಡೋ ಆಡುವ ಹವ್ಯಾಸವಿತ್ತು. ಈ ಆಟದ ಸಮಯದಲ್ಲೇ ಪಾಕ್ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಗೆಳತಿ ಪಾಕಿಸ್ತಾನದಲ್ಲಿರುವ ಕಾರಣ ನೇರವಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತ ಆತ ಕರಾಚಿಯಿಂದ ದುಬೈಗೆ, ದುಬೈಯಿಂದ ನೇಪಾಳದ ಕಠ್ಮಂಡುಗೆ ಕರೆಸಿಕೊಂಡಿದ್ದಾನೆ. ನೇಪಾಳದಲ್ಲಿ ಇಬ್ಬರು ಮದುವೆಯಾಗಿದ್ದು ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಬಿಹಾರದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದಾರೆ. ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನೆಲೆಸಿದ್ದರು.
ಇಕ್ರಾ ಜೀವನಿ ಪಾಕಿಸ್ತಾನದಲ್ಲಿರುವ ತಾಯಿಗೆ ಆಗಾಗ ಸಂಪರ್ಕ ಮಾಡುತ್ತಿದ್ದಳು. ಈ ವಿಷಯ ತಿಳಿದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇಕ್ರಾ ಜೀವನಿ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಎಫ್‌ಆರ್‌ಆರ್‌ಒ ಮೂಲಕ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಮುಲಾಯಂ ಸಿಂಗ್ ಯಾದವ್ ಮೇಲೆ ವಿದೇಶಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಮಂಗಳವಾರ ಆತನನ್ನು ಕಸ್ಟಡಿಗೆ ಪಡೆಯಲು ಪೊಲೀಸರು ತಯಾರಿ ನಡೆಸಿದ್ದಾರೆ.
ನಕಲಿ ಆಧಾರ್ ಕಾರ್ಡ್
ತನಿಖೆಯ ವೇಳೆ ಈಕೆ ರವಾ ಯಾದವ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಆ ಹೆಸರಿನಲ್ಲೇ ಪಾಸ್‌ಪೋರ್ಟ್ ಪಡೆಯಲು ಅರ್ಜಿ ಹಾಕಿದ್ದಾಳೆ. ಈಗ ಈ ಆಧಾರ್ ಕಾರ್ಡ್ ಹೇಗೆ ಸಿಕ್ಕಿದೆ ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಅಷ್ಟೇ ಮಧ್ಯಮ ವರ್ಗದ ಕುಟುಂಬದ ಆಕೆ ಕರಾಚಿಯಿಂದ ದುಬೈಗೆ, ದುಬೈಯಿಂದ ಕಠ್ಮಂಡುಗೆ ಬರಲು ಹೇಗೆ ಸಾಧ್ಯವಾಯಿತು? ಯಾರಾದರೂ ಸಹಾಯ ಮಾಡಿದ್ದಾರಾ ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.